ಮುಂಬಯಿ: ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಮೂವರು ವ್ಯಕ್ತಿಗಳು ಹಾಗೂ 22 ಕಂಪನಿಗಳಿಗೆ ಗುದ್ದು ನೀಡಿದೆ. ಭಾರೀ ಮೊತ್ತದ ದಂಡ ವಿಧಿಸಿದ್ದು, 5 ವರ್ಷಗಳ ಕಾಲ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ನಿಷೇಧ ಹೇರಿದೆ.
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಹೋಮ್ ಫೈನಾನ್ಸ್ ಕಂಪನಿಯಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಈ ಮಹತ್ವದ ಆದೇಶ ನೀಡಲಾಗಿದೆ. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಲಾಗಿದೆ. ಇನ್ನುಳಿದವರಿಗೂ ಹೆಚ್ಚಿನ ಮೊತ್ತದ ದಂಡ ಹಾಕಲಾಗಿದೆ. ಈ ಪ್ರಕರಣದಲ್ಲಿ ರಿಲಯನ್ಸ್ ಹೋಮ್ ನ ಮಾಜಿ ಅಧಿಕಾರಿಗಳೂ ಸೇರಿದ್ದಾರೆ. ಈ ಆದೇಶದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ 5 ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಬಾರದು ಎಂದು ಸೆಬಿ ಆದೇಶಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್‌ನ್ನೂ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ 6 ತಿಂಗಳ ಕಾಲ ನಿರ್ಬಂಧಿಸಲಾಗಿದ್ದು, ಕಂಪನಿ ಮೇಲೂ 6 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದೆ. ಸೆಬಿಯು ತನ್ನ ಆದೇಶದಲ್ಲಿ ಅನಿಲ್ ಅಂಬಾನಿಯು ಆರ್ ಎಚ್ ಎಫ್ ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ಸಹಾಯದಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ವಂಚನೆಯ ಯೋಜನೆ ರೂಪಿಸಿದ್ದರು. ಸಾಲ ಎಂದು ಹೇಳಿ ತಮಗೆ ಸಂಬಂಧಿಸಿದ ಕಂಪನಿಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು ಎಂದು ಹೇಳಿದೆ.
ಹೀಗಾಗಿ ಸೆಬಿ ಕಾರ್ಪೊರೇಟ್ ಸಾಲಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿತ್ತು. ಆದರೂ ನಿಯಮ ಪಾಲಿಸಿರಲಿಲ್ಲ. ಇದು ಆಡಳಿತ ವೈಫಲ್ಯವಾಗಿದ್ದು, ಅನಿಲ್ ಅಂಬಾನಿ ಪ್ರಭಾವದ ಮೇರೆಗೆ ಕೆಲವು ವ್ಯವಸ್ಥಾಪಕ ಸಿಬ್ಬಂದಿ ಇದನ್ನು ನಡೆಸಿದ್ದರು ಎಂದು ಸೆಬಿ ಆರೋಪಿಸಿದೆ.
ಈ ಪ್ರಕರಣದಡಿ ಅಂಬಾನಿಗೆ 25 ಕೋಟಿ ರೂ. ದಂಡ, ಬಾಪ್ನಾಗೆ 27 ಕೋಟಿ ರೂ, ಸುಧಾಲ್ಕರ್‌ಗೆ 26 ಕೋಟಿ ರೂ., ಶಾಗೆ 21 ಕೋಟಿ ರೂ. ದಂಡ ವಿಧಿಸಲಾಗಿದೆ. ಇದಲ್ಲದೆ ರಿಲಯನ್ಸ್ ಯೂನಿಕಾರ್ನ್ ಎಂಟರ್‌ಪ್ರೈಸಸ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಲೀನನ್ ಲಿಮಿಟೆಡ್, ರಿಲಯನ್ಸ್ ಬ್ಯುಸಿನೆಸ್ ಬ್ರಾಡ್‌ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಬಿಗ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 21 ಘಟಕಗಳಿಗೆ ತಲಾ 25 ಕೋಟಿ ರೂ. ದಂಡವನ್ನು ಸೆಬಿ ವಿಧಿಸಿದೆ.