ಮುಂಬಯಿ: ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು (Team India) 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಮುಂದಿನ ವರ್ಷ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ. ಸರಣಿಯ ಮೊದಲ ಪಂದ್ಯ ಜೂನ್ 20 ರಂದು ಲೀಡ್ಸ್ ನ ಹೆಡಿಂಗ್ಲಿ ಅಂಗಳದಲ್ಲಿ ನಡೆಯಲಿದೆ. 2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ಫೈನಲ್ ಪಂದ್ಯ ಕೂಡ ಮುಂದಿನ ಮುಂದಿನ ವರ್ಷದ ಜೂನ್ ನಲ್ಲಿ ನಡೆಯಲಿದೆ.
ಆನಂತರ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ (Ind vs Eng Test series) ಆರಂಭವಾಗಲಿದೆ. ಎರಡೂ ತಂಡಗಳಿಗೂ ಇದು 4ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿನ್ ಶಿಪ್ ಋತುವಿನ (2025-27) ಮೊದಲ ಸರಣಿಯಾಗಿರಲಿದೆ. ಎರಡೂ ತಂಡಗಳ ವಿರುದ್ಧ 5 ಟೆಸ್ಟ್ ಪಂದ್ಯಗಳು ನಡೆಯಲಿವೆ. 1 ತಿಂಗಳ ಕಾಲ ಈ ಸರಣಿ ನಡೆಯಲಿದೆ.
2007 ರಲ್ಲಿ ಪಟೌಡಿ ಟ್ರೋಫಿಯಲ್ಲಿ ಮೈಕೆಲ್ ವಾನ್ ನೇತೃತ್ವದ ತಂಡವನ್ನು ಭಾರತ ಸೋಲಿಸಿದ ನಂತರ ಇಲ್ಲಿಯವರೆಗೆ ಇಂಗ್ಲೆಂಡ್ ನಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದಿಲ್ಲ. ರಾಹುಲ್ ದ್ರಾವಿಡ್ ನೇತೃತ್ವದ ತಂಡ 2007ರಲ್ಲಿ ಸರಣಿ ಗೆದ್ದ ಸಾಧನೆ ಮಾಡಿತ್ತು. ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದರೆ, ಒಂದು ಪಂದ್ಯದಲ್ಲಿ ಭಾರತ ಗೆದ್ದಿತ್ತು. ಪ್ರಸಕ್ತ ವರ್ಷದ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ 4-1 ಅಂತರದಲ್ಲಿ ಗೆದ್ದಿತ್ತು. ಈಗ ಇಂಗ್ಲೆಂಡ್ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.