ಬೆಂಗಳೂರು: ರೌಡಿ ಶೀಟರ್ ಸೇರಿದಂತೆ ಕೆಲವರು ಹಣಕ್ಕಾಗಿ ತಾಯಿ ಹಾಗೂ ಮಗನನ್ನು ಕಿಡ್ನ್ಯಾಪ್ ಮಾಡಿ ಲೈಂಗಿಕ ಕಿರುಕುಳ ಕೊಟ್ಟು ಚಿತ್ರ ಹಿಂಸೆ ನೀಡಿರುವ ಘಟನೆಯೊಂದು ನಡೆದಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಲೇಔಟ್ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ವರುಣ್ ಮತ್ತು ಆತನ ತಾಯಿ ಅಪಹರಣಕ್ಕೊಳಗಾದವರು. ರೌಡಿ ಶೀಟರ್ ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ, ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು.
ಕಿಡ್ನ್ಯಾಪ್ ಆಗಿದ್ದ ಯುವಕನ ಮೇಲೆ ಕಳ್ಳತನ ಪ್ರಕರಣಗಳಿದ್ದವು. ಹೀಗಾಗಿ ಕದ್ದ ಹಣ ವಸೂಲಿ ಮಾಡುವುದಕ್ಕಾಗಿ ಯುವಕ ಹಾಗೂ ಆತನ ತಾಯಿಯನ್ನು ಆರೋಪಿಗಳು ಅಪಹರಿಸಿ, ಕಿರುಕುಳ (Physical Abuse) ನೀಡಿದ್ದಾರೆ ಎನ್ನಲಾಗಿದೆ.
ವರುಣ್ ಹಾಗೂ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ಗೊತ್ತಾಗಿದೆ. ಹೀಗಾಗಿ ಕಳ್ಳತನ ಮಾಡಿರುವ ಹಣ ನೀಡುವಂತೆ ತಾಯಿ-ಮಗನನ್ನು ಆರೋಪಿಗಳು ಬೆದರಿಸಿದ್ದಾರೆ. ಆದರೆ, ಅವರು ಹಣ ನೀಡಿಲ್ಲ. ಹೀಗಾಗಿ ಅವರನ್ನು ಕಿಡ್ನ್ಯಾಪ್ ಮಾಡಿದ್ದಾರೆ.
ಆ. 13ರಂದು ತಾಯಿ-ಮಗನನ್ನು ಆರೋಪಿಗಳಾದ ಜೋಸೇಫ್ ಮತ್ತು ಶ್ರೀನಿವಾಸ್@ಪಾಗಲ್ ಸೀನಾ ಕಿಡ್ನ್ಯಾಪ್ ಮಾಡಿದ್ದರು. ನಂತರ ಪರಿಚಯಸ್ಥನಾಗಿರುವ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ನೀಡಿದ್ದಾರೆ. ಈ ವೇಳೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. 2 ಲಕ್ಷ ರೂ. ಕೊಡುವಂತೆ ಆರೋಪಿಗಳು ಕಿರುಕುಳ ನೀಡಿದ್ದಾರೆ. ಆನಂತರ ಇಬ್ಬರ ಬಳಿಯೂ ಹಣ ಇಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಬಿಟ್ಟು ಕಳುಹಿಸಿದ್ದಾರೆ. ನಂತರ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದರಿಂದ 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಜೋಸೆಫ್ ಮತ್ತು ಪಾಗಲ್ ಸೀನ ಚಂದ್ರಾ ಲೇಔಟ್ ರೌಡಿ ಶೀಟರ್‌ಗಳಾಗಿದ್ದಾರೆ. ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಕೂಡ ಹಿಂದೆ ಹಲ್ಲೆ ಪ್ರಕರಣಗಳು ದಾಖಲಾಗಿದ್ದವು.