ಹಳ್ಳ ದಾಟುವ ವೇಳೆ ಕುರಿಗಳು ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೂದನೂರಿನ ಹಿರೇಹಳ್ಳದಲ್ಲಿ ಈ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯಾದ್ಯಂತ ಶನಿವಾರ ಭಾರೀ ಮಳೆ ಸುರಿದಿದೆ. ವ್ಯಾಪಕ ಮಳೆಯಿಂದಾಗಿ (Rain News) ಬೂದನೂರಿನ ಹಿರೇಹಳ್ಳ ತುಂಬಿ ಹರಿಯುತ್ತಿದೆ. ಈ ವೇಳೆ ಮೇಯುತ್ತ ಬಂದ ಕುರಿಗಳು ಹಳ್ಳ ದಾಟುವ ವೇಳೆ ಕೊಚ್ಚಿ ಹೋಗಿವೆ. ಹಳ್ಳದಲ್ಲಿ 20ಕ್ಕೂ ಹೆಚ್ಚು ಕುರಿಗಳು ಕೊಚ್ಚಿ ಹೋಗಿವೆ. ಇತ್ತ ಹಿರೇಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ 50 ಕ್ಕೂ ಅಧಿಕ ಕುರಿಗಳನ್ನು ರಕ್ಷಿಸಲಾಗಿದೆ. ಬೂದನೂರ ಗ್ರಾಮದ ಸಾಮಯ್ಯ ಎಂಬ ಕುರುಗಾಯಿಗೆ ಸೇರಿದ್ದ ಕುರಿಗಳು ಕೊಚ್ಚಿ ಹೋಗಿವೆ.
ಗ್ರಾಮಸ್ಥರ ಸಹಾಯದಿಂದ 50 ಕ್ಕೂ ಹೆಚ್ಚು ಕುರಿಗಳ ರಕ್ಷಿಸಲಾಗಿದೆ. 20ಕ್ಕೂ ಹೆಚ್ಚು ಕುರಿಗಳು ಹಿರೇಹಳ್ಳದ ನೀರು ಪಾಲಾಗಿವೆ.
ರಾಜ್ಯದ ಹಲವೆಡೆ ಬ್ರೇಕ್ ಪಡೆದಿದ್ದ ಮಳೆರಾಯ ಮತ್ತೆ ಸುರಿಯಲು ಆರಂಭಿಸಿದ್ದಾನೆ. ಆ. 19ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ.
ಅಲ್ಲದೇ, ದಕ್ಷಿಣ ಒಳನಾಡಿನ ರಾಮನಗರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಇನ್ನು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.