ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನ ಫೈನಲ್ ಪಂದ್ಯದಲ್ಲಿ ಕೇವಲ 100 ಗ್ರಾಂ ತೂಕ ಹೆಚ್ಚಾಗಿರುವುದಕ್ಕೆ ಅನರ್ಹಗೊಂಡು ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್(Vinesh Phogat) ದೇಶಕ್ಕೆ ಮರಳಿದ್ದಾರೆ. ಆದರೆ, ಅವರು ತುಂಬಾ ಸುಸ್ತಾಗಿದ್ದು, ಸನ್ಮಾನ ಸಮಾರಂಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.
ದೇಶಕ್ಕೆ ಬಂದ ಫೋಗಟ್ ಅವರನ್ನು ದೆಹಲಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, ರೈತ ನಾಯಕರು, ಭಜರಂಗ್ ಪೂನಿಯ, ಸಾಕ್ಷಿ ಮಲಿಕ್ ಸೇರಿದಂತೆ ಹಲವರು ಅಲ್ಲಿ ನೆರೆದಿದ್ದರು. ಹರಿಯಾಣದ ಬಲಾಲಿವರೆಗೂ ಮೆರವಣಿಗೆ ಮಾಡಲಾಯಿತು. ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಈ ವಿಡಿಯೊ ಇದೀಗ ವೈರಲ್ ಆಗಿದೆ.
ವಿಡಿಯೊದಲ್ಲಿ ವೇದಿಕೆಯಲ್ಲಿ ಕುಳಿತಿದ್ದ ವಿನೇಶ್ ಏಕಾಏಕಿ ಪ್ರಜ್ಞೆ ತಪ್ಪಿದ್ದಾರೆ. ಕುಳಿತಿದ್ದ ಕುರ್ಚಿಗೆ ಒರಗಿಕೊಂಡು ಮಲಗಿರುವುದನ್ನು ಕಾಣಬಹುದಾಗಿದೆ. ಪಕ್ಕದಲ್ಲೇ ಇದ್ದ ಭಜರಂಗ್ ಪೂನಿಯಾ ವಿನೇಶ್ ಗೆ ನೀರು ಕೊಟ್ಟು ಉಪಚರಿಸಿದ್ದಾರೆ. ಆರಂಭದಲ್ಲಿ ಇದನ್ನು ಅವರು ಮಲಗಿರಬಹುದು ಎಂದೇ ಅಲ್ಲಿದ್ದವರು ಭಾವಿಸಿದ್ದಂತೆ ಕಂಡಿದೆ.
ಫೈನಲ್ ಪಂದ್ಯಕ್ಕೂ ಮುನ್ನ ಹೆಚ್ಚಳವಾಗಿದ್ದ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೆ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್, ರಕ್ತ ದಾನ ಸೇರಿದಂತೆ ನಾನಾ ಕಸರತ್ತು ನಡೆಸಿದ್ದರು. ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ, ದೇಹದಿಂದ ರಕ್ತವನ್ನು ಕೂಡ ತೆಗಿದಿದ್ದರು. ರಕ್ತ ತೆಗೆದ ಪರಿಣಾಮ ಅಸ್ವಸ್ಥರಾಗಿ ಆಸ್ಪತ್ರೆ ಕೂಡ ಸೇರಿದ್ದರು. ಈ ಅಸ್ವಸ್ಥದಿಂದ ಇನ್ನೂ ಸರಿಯಾಗಿ ಚೇತರಿಕೊಂಡಂತೆ ಕಾಣುತ್ತಿಲ್ಲ. ಎಲ್ಲ ಬಿಡುವಿಲ್ಲದ ಕೆಲಸಗಳ ಮದ್ಯೆ ಅವರು ಮರಳಿ ದೇಶಕ್ಕೆ ಬಂದಿದ್ದಾರೆ. ಹೀಗಾಗಿ ಪ್ರಜ್ಞೆ ತಪ್ಪಿದಂತೆ ಕಾಣುತ್ತಿದೆ.
ಹೀಗಾಗಿ ಅವರು ಮೊದಲು ವಿಶ್ರಾಂತಿ ಪಡೆಯಲಿ, ಆನಂತರ ಸನ್ಮಾನ ಸಮಾರಂಭ ಆಯೋಜಿಸಿ ಎಂದು ನೆಟ್ಟಿಗರು ಹೇಳಿದ್ದಾರೆ. ವಿನೇಶ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಪ್ರಧಾನಿ ಕೂಡ ವಿನೇಶ್ ಅವರನ್ನು ಹೊಗಳಿದ್ದರು.