ಇತ್ತೀಚೆಗೆ ಸ್ಟಾರ್ ನಟರಂತೆಯೇ ಹಾಸ್ಯ ನಟರು ಕೂಡ ಹೆಸರು ಮಾಡಿದ್ದಾರೆ. ಅವರಿಗೂ ದೊಡ್ಡ ಅಭಿಮಾನಿ ಬಳಗವಿದೆ. ಬಾಲಿವುಡ್ ಹಾಸ್ಯ ನಟ ರಾಜಪಾಲ್ ಯಾದವ್ ಗೆ ಸಾಕಷ್ಟು ಅಭಿಮಾನಿಗಳಿದ್ದು, ನಾಯಕ ನಟರಂತೆಯೇ ಹೆಸರು ಮಾಡಿದ್ದಾರೆ. ಸದ್ಯ ಅವರ ಆಸ್ತಿಯನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿದೆ.
ಅದ್ಭುತ ನಟನೆ, ದೇಹಭಾಷೆ, ಡೈಲಾಗ್ ಡೆಲಿವರಿಯಿಂದ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ರಾಜ್ಪಾಲ್ ಯಾದವ್ ಸಂಕಷ್ಟಕ್ಕೆ ಸಿಲುಕಿದ್ದು, ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಹೀಗಾಗಿ ಸಿಬಿಐ ಯಾದವ್ ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಸಿಬಿಐ ಅಂದರೆ ತನಿಖಾ ಸಂಸ್ಥೆ ಅಲ್ಲ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ.
ರಾಜಪಾಲ್ ಯಾದವ್ ಅವರಿಗೆ ಸೇರಿದ್ದು ಎನ್ನಲಾಗಿರುವ ಉತ್ತರ ಪ್ರದೇಶದ ಶಹಜಾನ್ಪುರದಲ್ಲಿರುವ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ರಾಜಪಾಲ್ ಯಾದವ್ ಈ ಜಮೀನನ್ನು ಖರೀದಿ ಮಾಡಿದ್ದರು. ಅಲ್ಲದೇ, ರಾಜಪಾಲ್ ಯಾದವ್ ಅವರು ಹಿಂದೆ ತಮ್ಮ ಪೋಷಕರಾದ ನೌರಂಗ್ ಮತ್ತು ಗೋಧಾವರಿ ಅವರುಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭ ಮಾಡಿದ್ದರು. ಅದಕ್ಕೆ ನೌರಂಗ್-ಗೋಧಾವರಿ ಎಂಟರ್ಟೈನ್ ಮೆಂಟ್ ಎಂದು ಹೆಸರಿಟ್ಟಿದ್ದರು.
ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ರಾಜ್ಪಾಲ್ ಯಾದವ್ ಸಿನಿಮಾ ಮಾಡಿದ್ದರು. ಸಿನಿಮಾದಲ್ಲಿ ದಿವಂಗತ ಓಂ ಪುರಿ ಸಹ ನಟಿಸಿದ್ದರು. ಆ ಸಿನಿಮಾ ನಿರ್ಮಾಣಕ್ಕೆ ಶಹಜಾನ್ಪುರದಲ್ಲಿನ ಜಮೀನು ಅಡವಿಟ್ಟು ಮೂರು ಕೋಟಿ ಸಾಲ ಪಡೆದಿದ್ದರು. ಆದರೆ, ಆ ಚಿತ್ರ ಸೋತು ಸುಣ್ಣವಾಗಿತ್ತು. ನಂತರ ಸಾಲ ಮರುಪಾವತಿ ಮಾಡಲು ಆಗಲಿಲ್ಲ.
ಮೂರು ಕೋಟಿ ರೂಪಾಯಿ ಸಾಲ ಬಡ್ಡಿ, ಇನ್ನಿತರೆ ಶುಲ್ಕ, ದಂಡಗಳು ಸೇರಿಕೊಂಡು ಈಗ 11 ಕೋಟಿ ರೂ. ಆಗಿದೆ. ಸಾಕಷ್ಟು ನೋಟಿಸ್ ಗಳನ್ನು ಕಳುಹಿಸಿದ್ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ಇದೇ ತಿಂಗಳ ಎರಡನೇ ವಾರದಲ್ಲಿ ಶಹಜಾನ್ಪುರಕ್ಕೆ ತೆರಳಿ ರಾಜ್ಪಾಲ್ ಯಾದವ್ ಅವರಿಗೆ ಸೇರಿದ ಅಡವಿಟ್ಟಿದ್ದ ಜಮೀನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.