ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 2 ಕಂಚಿನ ಪದಕ ಗೆದ್ದು ಕೊಟ್ಟಿರುವ ಮನು ಭಾಕರ್, ಈ ಬಾರಿ ಭಾರತದಲ್ಲಿಯೇ ನಡೆಯಲಿರುವ ಶೂಟಿಂಗ್ ವಿಶ್ವಕಪ್ ನಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ.
ಈ ಕುರಿತು ಮನು ಅವರ ಕೋಚ್ ಜಸ್ಪಾಲ್ ರಾಣಾ ತಿಳಿಸಿದ್ದಾರೆ. ಸದ್ಯ ಮನು ಮೂರು ತಿಂಗಳ ವಿರಾಮ ಕೇಳಿದ್ದಾರೆ. ಹೀಗಾಗಿ ಅವರು ಶೂಟಿಂಗ್ ವಿಶ್ವಕಪ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಮನು ಆಡುವುದು ಗೊತ್ತಾಗಿಲ್ಲ. ಸತತವಾಗಿ ಸ್ಪರ್ಧೆಯಲ್ಲಿ ತೊಡಗಿಸಿಕೊಂಡ ಬಳಿಕ ದೀರ್ಘ ವಿರಾಮ ತೆಗೆದುಕೊಳ್ಳುವುದು ಎಲ್ಲಾ ಕ್ರೀಡೆಯಲ್ಲೂ ಸಾಮಾನ್ಯ. ಹೀಗಾಗಿ ಮನು ಕೂಡ ವಿರಾಮ ಬಯಸಿದ್ದಾರೆ. ಅಲ್ಲದೇ, ಮನು ಭಾಕರ್ ಅವರ ಗಮನವು 2026 ರ ಏಷ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ಮೇಲಿದೆ. ಹೀಗಾಗಿ ಅವರು ಸದ್ಯಕ್ಕೆ ವಿರಾಮ ಬಯಸಿದ್ದಾರೆ ಎಂದು ಹೇಳಿದ್ದಾರೆ.
ಅಕ್ಟೋಬರ್ 13 ರಿಂದ 18 ರ ವರೆಗೆ ನವದೆಹಲಿಯಲ್ಲಿ ಶೂಟಿಂಗ್ ವಿಶ್ವಕಪ್ ನಡೆಯಲಿದೆ. ಜಗತ್ತಿನ ಅನುಭವಿ ಶೂಟರ್‌ಗಳು ಈ ವಿಶ್ವಕಪ್‌ನಲ್ಲಿ ಆಡಲಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆ ತೆರೆದಿದ್ದರು. ನಂತರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದ ಮಿಶ್ರ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಕಂಚು ಗೆದ್ದಿದ್ದರು. ಮತ್ತೊಂದು ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿಯೇ ಅವರು ಕೈ ಚೆಲ್ಲಿದ್ದರು. ಈ ಮೂಲಕ ಭಾರತದ ಪರ ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ್ದಾರೆ.