ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡ ಈಗ ಮತ್ತೊಂದು ಸರಣಿಗೆ ಸಜ್ಜಾಗಬೇಕಿದೆ.
ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡ ಮಣಿಸಿದ ಭಾರತ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು. ಈ ಮೂಲಕ ಸತತ ಎರಡು ಒಲಿಂಪಿಕ್ಸ್ ಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿತ್ತು. ಈಗ ಒಲಿಂಪಿಕ್ಸ್ ನಿಂದ ದೇಶಕ್ಕೆ ಮರಳಿರುವ ಹಾಕಿ ತಂಡ ಮುಂದಿನ ತಿಂಗಳಿಂದ ಮತ್ತೆ ಕಣಕ್ಕೆ ಇಳಿಯಲು ತಯಾರಿ ನಡೆಸಿದೆ.
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಇಂದು ಬಿಡುಗಡೆಯಾಗಿದೆ. ಈ ಟೂರ್ನಿ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 17 ರ ವರೆಗೆ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಏಷ್ಯಾದ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ.
ಈ 6 ತಂಡಗಳ ಪೈಕಿ ಭಾರತ, ಪಾಕಿಸ್ತಾನ, ಆತಿಥೇಯ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಕಣಕ್ಕೆ ಇಳಿಯಲಿವೆ. ಸೆಪ್ಟೆಂಬರ್ 8 ರಿಂದ ಈ ಟೂರ್ನಿ ಆರಂಭವಾದರೂ, ಟೂರ್ನಿಯ ಹೈವೋಲ್ಟೇಜ್ ಪಂದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ.
ಸೆಪ್ಟೆಂಬರ್ 8 ರಂದು ದಕ್ಷಿಣ ಕೊರಿಯಾ ಮತ್ತು ಜಪಾನ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಅದೇ ದಿನ ಭಾರತ ಹಾಕಿ ತಂಡ ಚೀನಾ ತಂಡವನ್ನು ಎದುರಿಸಲಿದೆ. ಆ ಬಳಿಕ ಭಾರತ ತಂಡ ಸೆಪ್ಟೆಂಬರ್ 9 ರಂದು ಜಪಾನ್, ಸೆಪ್ಟೆಂಬರ್ 11 ರಂದು ಮಲೇಷ್ಯಾ, ಸೆಪ್ಟೆಂಬರ್ 12 ರಂದು ದಕ್ಷಿಣ ಕೊರಿಯಾ ಮತ್ತು ನಂತರ ಸೆಪ್ಟೆಂಬರ್ 14 ರಂದು ಪಾಕಿಸ್ತಾನ ಎದುರು ಸೆಣಸಾಟ ನಡೆಸಲಿದೆ.
ಲೀಗ್ ಹಂತದಲ್ಲಿ ಎಲ್ಲ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ಲೀಗ್ ಸುತ್ತಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶ ನಡೆಸಲಿವೆ. ಸೆಮಿಫೈನಲ್ನಲ್ಲಿ ಗೆದ್ದ ಎರಡು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಈ ಟೂರ್ನಿಯಲ್ಲಿ ಭಾರತ ಹಾಲಿ ಚಾಂಪಿಯನ್ ಆಗಿರುವುದರಿಂದ ಸಹಜವಾಗಿ ಮತ್ತೊಮ್ಮೆ ಚಾಂಪಿಯನ್ ಆಗಲು ಪ್ರಯತ್ನಿಸಬೇಕಿದೆ. ಎಲ್ಲ ತಂಡಗಳ ದೃಷ್ಟಿ ಭಾರತ ತಂಡದ ಮೇಲೆ ನೆಟ್ಟಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ 6 ತಂಡಗಳ ಪೈಕಿ ಭಾರತ ಒಂದೇ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿತ್ತು. ಹೀಗಾಗಿ ಈ ಬಾರಿಯೂ ಭಾರತವೇ ಚಾಂಪಿಯನ್ ಆಗುವ ಎಲ್ಲ ಸಾಧ್ಯತೆಗಳಿವೆ. ಈ ಟೂರ್ನಿಯಲ್ಲಿ ಭಾರತ ಇಲ್ಲಿಯವರೆಗೆ ನಾಲ್ಕು ಬಾರಿ ಚಾಂಪಿಯನ್ ಆಗಿದ್ದು, ಮತ್ತೊಮ್ಮೆ ಚಾಂಪಿಯನ್ ಆಗಲು ಸೆಣಸಾಟ ನಡೆಸಲಿದೆ.