ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಹಿಂಸಾರೂಪ ತಾಳಿ, ಜನರ ಮಾರಣ ಹೋಮ ನಡೆಯುತ್ತಿದೆ. ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದಿಂದ ಪಲಾಯನ ಮಾಡಿದರೂ ಅಲ್ಲಿನ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಈ ಮಧ್ಯೆ 2024 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆಯೋಜನೆಯ ಹಕ್ಕು ಪಡೆದುಕೊಂಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ದಿಕ್ಕು ತೋಚದಂತಾಗಿದೆ.
ಈ ಬಾರಿಯ ಐಸಿಸಿ ಟಿ20 ಮಹಿಳಾ ವಿಶ್ವಕಪ್ ಆತಿಥ್ಯದ ಹಕ್ಕು ಬಾಂಗ್ಲಾದೇಶದ ಪಾಲಾಗಿತ್ತು. ಇದೇ ವರ್ಷದ ಅಕ್ಟೋಬರ್ ನಲ್ಲಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಬೇಕಿದೆ. ಅಲ್ಲಿನ ಆಂತರಿಕ ಸ್ಥಿತಿ ಸರಿ ಇಲ್ಲದ ಹಿನ್ನೆಲೆಯಲ್ಲಿ ವಿಶ್ವಕಪ್ ನ ಆತಿಥ್ಯ ಬಾಂಗ್ಲಾದೇಶದಿಂದ ಕೈ ಜಾರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ, ಟೂರ್ನಿ ನಡೆಯುವುದು ಅನುಮಾನವಾಗುತ್ತಿದೆ.
ಇದರ ಬೆನ್ನಲ್ಲಿಯೇ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಸೇನೆಯ ನೆರವು ಕೋರಿದೆ. ಸದ್ಯದ ಮಾಹಿತಿಯಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸೇನಾ ಮುಖ್ಯಸ್ಥ ಜನರಲ್ ವಾಕರ್ ಜಮಾನ್ ಅವರಿಗೆ ಪತ್ರ ಬರೆದು, ಟಿ20 ವಿಶ್ವಕಪ್ ಆಯೋಜಿಸಲು ಸೇನೆಯಿಂದ ಭದ್ರತೆಯ ಭರವಸೆ ಕೋರಲಾಗಿದೆ. ಬಾಂಗ್ಲಾ ಕ್ರಿಕೆಟ್ ಮಂಡಳಿಯ ಈ ಕೋರಿಕೆಗೆ ಸೇನೆ ಯಾವ ರೀತಿ ಸ್ಪಂದಿಸಲಿದೆ ಎಂಬುವುದರ ಮೇಲೆ ಮುಂದಿನ ನಿರ್ಧಾರವಾಗಲಿದೆ. ಅಲ್ಲದೇ, ಬಾಂಗ್ಲಾದೇಶದಲ್ಲಿನ ಹಿಂಸಾಚಾರದ ಮೇಲೆ ಕಣ್ಣಿಟ್ಟಿರುವ ಐಸಿಸಿ, ಬೇರೆಡೆ ವಿಶ್ವಕಪ್ ಆಯೋಜಿಸಲು ಚಿಂತಿಸುತ್ತಿದೆ ಎಂದು ಕೂಡ ವರದಿಯಾಗಿದೆ.
ಸೆಪ್ಟೆಂಬರ್ 27ರಿಂದ ಆರಂಭವಾಗಲಿರುವ ಟೂರ್ನಿಗೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯಲಿವೆ. ಆದರೆ ಬಾಂಗ್ಲಾದೇಶದ ಹದಗೆಡುತ್ತಿರುವ ಪರಿಸ್ಥಿತಿಯಿಂದಾಗಿ ಐಸಿಸಿ ಹೋಸ್ಟಿಂಗ್ ಹಕ್ಕನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಕಸಿದುಕೊಂಡು ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ ಅಥವಾ ಶ್ರೀಲಂಕಾದಲ್ಲಿ ಆಯೋಜಿಸಲು ಮುಂದಾಗಬಹುದು ಎನ್ನಲಾಗುತ್ತಿದೆ.