ಮನುಷ್ಯನ ಆಯಸ್ಸು ಗಟ್ಟಿ ಇದ್ದರೆ ಸಾಕು, ದೇವರೆ ಬಂದರೂ ಜೀವ ತೆಗೆದುಕೊಳ್ಳಲು ಆಗುವುದಿಲ್ಲ ಅಂತಾರೆ. ಅಂತಹ ಮಾತು ಇಲ್ಲೊಂದು ಘಟನೆಯಲ್ಲಿ ಸತ್ಯ ಅನಿಸುತ್ತಿದೆ.
ಶುಕ್ರವಾರ ನಡೆದ ಬ್ರೆಜಿಲ್ ವಿಮಾನ ಪತನದಲ್ಲಿ ಅದರಲ್ಲಿದ್ದ ಸಿಬ್ಬಂದಿ ಸೇರಿದಂತೆ 68 ಜನರು ಸಜೀವವಾಗಿ ದಹನವಾಗಿದ್ದಾರೆ. ಆದರೆ, ಒಬ್ಬರೇ ಒಬ್ಬರು ಮಾತ್ರ ಬದುಕುಳಿದಿದ್ದಾರೆ. ಅವರು ಕೂಡ ಇದೇ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ, ವಿಮಾನ ಮಿಸ್ ಆಗಿದ್ದರಿಂದಾಗಿ ಅವರು ಬದುಕುಳಿದಿದ್ದಾರೆ. ಈಗ ಇದನ್ನು ಕೇಳಿದ ಜನ ಆಯಸ್ಸು ಗಟ್ಟಿ ಕಣಪ್ಪಾ ನಿಮ್ಮದು ಎಂದು ಹೇಳುತ್ತಿದ್ದಾರೆ.
ಆ ವ್ಯಕ್ತಿ ಕೂಡ ಅಬ್ಬಾ ಪ್ರಾಣ ಉಳಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ, ವಿಮಾನ ಏರದಂತೆ ತಡೆದ ವಿಮಾನ ನಿಲ್ದಾಣ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಬ್ರೆಜಿಲ್ ನ ವೊಪಾಸ್ ಏರ್ ಲೈನ್ಸ್ ವಿಮಾನವು ವಿನ್ ಹೆಡೊದಲ್ಲಿನ ವಸತಿ ಪ್ರದೇಶಕ್ಕೆ ಅಪ್ಪಳಿಸಿದೆ. ಅಪಘಾತದಲ್ಲಿ ಸಿಬ್ಬಂದಿ ಸೇರಿದಂತೆ 68 ಜನರು ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ರಿಯೊ ಡಿ ಜನೈರೊ ನಿವಾಸಿ ಅಡ್ರಿಯಾನೊ ಅಸಿಸ್ ಎಂಬುವವರು ಮಾತ್ರ ಅದೃಷ್ಟದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನು ಖುದ್ದು ಅವರೇ ಬಹಿರಂಗಪಡಿಸಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಉದ್ಯೋಗದ ಶಿಫ್ಟ್ ಮುಗಿಸಿ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದರಿಂದ ಅಸಿಸ್ ಸ್ವಲ್ಪದರಲ್ಲೇ ಪ್ಲೈಟ್ ಮಿಸ್ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ತಾನು 9:40 ಕ್ಕೆ ಚೆಕ್-ಇನ್ ಕೌಂಟರ್ ನ್ನು ತಲುಪಿದ್ದೆ. ಆದರೆ ವಿಮಾನ ನಿಲ್ದಾಣದಲ್ಲಿ ವಿಮಾನ ಅದಲು ಬದಲಾಯಿತು. ಕ್ಯಾಸ್ಕಾವೆಲ್ ನಿಂದ ಗೌರುಲ್ಹೋಸ್ ಗೆ ತೆರಳುತ್ತಿದ್ದ ಎರಡು ಗಂಟೆಗಳ ವಿಮಾನವನ್ನು ನಾನು ತಪ್ಪಿಸಿಕೊಂಡೆ ಎಂದಿದ್ದಾರೆ. ಆದರೆ, ಘಟನೆಯ ಸುದ್ದಿ ಕೇಳಿ ಆಘಾತಗೊಂಡೆ ಎಂದಿದ್ದಾರೆ.