ಪ್ಯಾರಿಸ್ ಒಲಿಂಪಿಕ್ಸ್ ಮಹಿಳಯೆರ 50 ಕೆಜಿ ಕುಸ್ತಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ತೂಕ ಹೆಚ್ಚಾಗಿದ್ದಕ್ಕೆ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಆ ನಂತರ ಈ ನಿರ್ಧಾರದ ವಿರುದ್ಧ ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಈಗ ವಿನೇಶ್ ಅವರ ಮನವಿಯ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ, ‘ಒಲಿಂಪಿಕ್ಸ್ ಅಂತ್ಯದ ವೇಳೆಗೆ ಅಂದರೆ ಆಗಸ್ಟ್ 11ಕ್ಕೂ ಮುನ್ನ ತೀರ್ಪು ನೀಡುವುದಾಗಿ ಹೇಳಿದೆ.
ವಿನೇಶ್ ತನ್ನ ಮನವಿಯಲ್ಲಿ ತನಗೆ ಫೈನಲ್ ಪಂದ್ಯವನ್ನು ಆಡಲು ಅನುಮತಿ ನೀಡಬೇಕೆಂದು ಕೋರಿದ್ದರು. ಆದರೆ ವಿನೇಶ್ ಅವರ ಮನವಿಯಂತೆ ಫೈನಲ್ ಪಂದ್ಯವನ್ನು ನಿಲ್ಲಿಸುವುದಿಲ್ಲ ಎಂದು ಸಿಎಎಸ್ ಹೇಳಿತ್ತು. ಆ ನಂತರ ಫೋಗಟ್ ಜಂಟಿ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು ಕೋರಿದ್ದರು. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವು (ಸಿಎಎಸ್) ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ವಿನೇಶ್ ಫೋಗಟ್ ಅವರ ಅನರ್ಹತೆಯ ವಿರುದ್ಧದ ಅರ್ಜಿಯ ಕುರಿತು ಒಲಿಂಪಿಕ್ ಕ್ರೀಡಾಕೂಟ ಮುಗಿಯುವ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದಾಗಿ ಹೇಳಿದೆ.
ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿನೇಶ್ ಫೋಗಟ್ ಅವರ ಮನವಿಯ ಬಗ್ಗೆ ವಾದಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ದೇಶದ ಪ್ರಖ್ಯಾತ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾರನ್ನು ನೇಮಿಸಲಾಗಿದೆ.
ಕೋರ್ಟ್ ಆಫ್ ಆರ್ಬಿಟ್ರೇಶನ್, ಕ್ರೀಡಾ ವಿವಾದಗಳನ್ನು ಪರಿಹರಿಸಲು 1984 ರಲ್ಲಿ ಸ್ಥಾಪಿಸಲಾದ ಸ್ವತಂತ್ರ ಸಂಸ್ಥೆಯಾಗಿದೆ. ಇದು ಸ್ವಿಟ್ಜರ್ಲೆಂಡ್ನ ಲೌಸನ್ನೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ನ್ಯೂಯಾರ್ಕ್ ನಗರ ಮತ್ತು ಸಿಡ್ನಿಯಲ್ಲಿ ನ್ಯಾಯಾಲಯಗಳನ್ನು ಹೊಂದಿದೆ.