ಬರೋಬ್ಬರಿ 27 ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡವು ಶ್ರೀಲಂಕಾ ವಿರುದ್ಧ ಸರಣಿ ಸೋಲು ಕಂಡಿದೆ.
ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ 110 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ರೋಹಿತ್ ಪಡೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಮುಜುಗರದ ಸೋಲನ್ನು ಅನುಭವಿಸಿದೆ.
ಇಡೀ ಸರಣಿಯಲ್ಲಿ ಟೀಂ ಇಂಡಿಯಾ 8ನೇ ಕ್ರಮಾಂಕದವರೆಗೂ ಬ್ಯಾಟ್ಸಮನ್ ಗಳನ್ನು ಹೊಂದಿದ್ದರೂ ಮೂರೂ ಪಂದ್ಯಗಳಲ್ಲಿ ಕೇವಲ 250 ಕ್ಕೂ ಕಡಿಮೆ ಟಾರ್ಗೆಟ್ ನ್ನು ಬೆನ್ನಟ್ಟಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು. ಈ ಮೂಲಕ 1997 ರ ನಂತರ ಅಂದರೆ ಬರೋಬ್ಬರಿ 27 ವರ್ಷಗಳ ನಂತರ ಲಂಕಾ ನಾಡಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಸೋತ ಕಳಪೆ ದಾಖಲೆ ಬರೆದುಕೊಂಡಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಈ ಬ್ಯಾಟಿಂಗ್ ವೈಫಲ್ಯ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಗೆ ಚಿಂತೆ ಉಂಟು ಮಾಡಿದೆ.
ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 248 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ 138 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿದೆ. ಕೇವಲ 26.1 ಓವರ್ ಗಳಿಗೆ ಭಾರತ ತನ್ನೆಲ್ಲ ವಿಕೆಟ್ ಕಳೆದುಕೊಂಡು ಮುಖಭಂಗ ಅನುಭವಿಸಿದೆ.