ದೆಹಲಿ: ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭೆ ಸದಸ್ಯರು ಆಗಿರುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಕಾರ್ಯ ನಿಮಿತ್ತ ದೆಹಲಿ ಪ್ರವಾಸ ಕೈಗೊಂಡಿದ್ದು, ಬಿಡುವಿನ ವೇಳೆಯಲ್ಲಿ ನಿನ್ನೆ (ಆ.06) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಮನೆಗೆ ತೆರಳಿ ಉಭಯ ಕುಶಲೋಪರಿ ನಡೆಸಿದರು. ಸಂಜೆ ಏಳರ ಹೊತ್ತಿಗೆ ಮನೆಗೆ ಆಗಮಿಸಿದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಸಚಿವರು ಗೌರವದ ಆತಿಥ್ಯ ನೀಡಿ ಸತ್ಕರಿಸಿದರು.

ಪ್ರಹ್ಲಾದ್ ಜೋಶಿಯವರ ಜೊತೆ ಒಂದಷ್ಟು ಹೊತ್ತು ಮಾತುಕತೆಯಲ್ಲಿ ಕಳೆದ ವೀರೇಂದ್ರ ಹೆಗ್ಗಡೆಯವರು ರಾಜ್ಯದ ಹಿತದೃಷ್ಟಿಯಿಂದ ಕೆಲ ವಿಚಾರ ಚರ್ಚಿಸಿದರು. ಈ ವೇಳೆ ಸಚಿವ ಜೋಶಿಯವರು ಧರ್ಮಸ್ಥಳದ ಸಂಸ್ಥೆಗಳ ಮುಖೇನ ನಡೆಸುತ್ತಿರುವ ಸಮಾಜಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮೀಣ ಮಟ್ಟದಲ್ಲಿ ಬಹು ಉಪಯೋಗಿ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ರುಡ್ಸೆಟಿ ಮತ್ತು ಸಿರಿಗ್ರಾಮೋದ್ಯೋಗ ಸಂಸ್ಥೆಯ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಒಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲಾಗುತ್ತಿರುವ ಸಮಾಜಮುಖಿ ಕಾರ್ಯಗಳು ಸರಿಯಾದ ದಾರಿಯಲ್ಲಿ ಸಾಗುತ್ತಾ ಫಲಾನುಭವಿಗಳ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದೆ ಎಂದು ಕೇಳಿ ಸಚಿವರು ಸಂತಸ ವ್ಯಕ್ತಪಡಿಸಿದರು.