ಬಾಂಗ್ಲಾದೇಶದಲ್ಲಿ ಹಿಂಸಾಚಾರ ಉಗ್ರ ರೂಪ ಪಡೆಯುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಶೇಖ್ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದು ಗೊಳಿಸಿದೆ.
ಪಲಾಯನಗೊಂಡಿದ್ದ ಶೇಖ್ ಹಸೀನಾ ಅವರು ಇಂಗ್ಲೆಂಡ್ ನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದರು. ಆದರೆ, ಅವರಿಗೆ ಅಲ್ಲಿಗೆ ತೆರಳಲು ಇನ್ನೂ ಅನುಮತಿ ಸಿಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ದೆಹಲಿಯಲ್ಲಿ ಸುರಕ್ಷಿತ ಸ್ಥಳದಲ್ಲಿದ್ದಾರೆ. ಮೂಲಗಳಂತೆ ಶೇಖ್ ಹಸೀನಾ ಅವರಿಗೆ ಇಂಗ್ಲೆಂಡ್ ನಲ್ಲಿ ಕೂಡ ಆಶ್ರಯ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇನ್ನೊಂದೆಡೆ ಅಮೆರಿಕಾ ಕೂಡ ಅವರ ವೀಸಾ ರದ್ದುಗೊಳಿಸಿದೆ.
ಹೀಗಾಗಿ ಶೇಖ್ ಹಸೀನಾ ಅವರು ಭಾರತದಲ್ಲಿಯೇ ಉಳಿಯಬಹುದು. ಸದ್ಯ ಅವರು ಭಾರತದಲ್ಲಿ ಸುರಕ್ಷಿತ ಮತ್ತು ರಹಸ್ಯ ಸ್ಥಳದಲ್ಲಿದ್ದಾರೆ. ಅವರಿಗೆ ಭಾರತದಲ್ಲಿ ಆಶ್ರಯ ನೀಡಿರುವ ಬಗ್ಗೆ ಈಗಾಗಲೇ ಮೋದಿ ಸರ್ಕಾರ ರಾಜ್ಯಸಭೆಯಲ್ಲಿ ಘೋಷಿಸಿದೆ. ಈ ಹಿಂದೆ 1975ರಲ್ಲಿ ಕೂಡ ಶೇಖ್ ಹಸೀನಾ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರಿಂದಾಗಿ ದೆಹಲಿಯಲ್ಲಿ 6 ವರ್ಷಗಳ ಕಾಲ ಆಶ್ರಯ ಪಡೆದಿದ್ದರು.
ಶೇಖ್ ಹಸೀನಾ ಅವರ ಸಹೋದರಿ ಶೇಖ್ ರೆಹಾನಾ ಯುಕೆ ಪೌರತ್ವವನ್ನು ಹೊಂದಿದ್ದಾರೆ. ಹೀಗಾಗಿ, ಅವರು ಇಂಗ್ಲೆಂಡ್ ನಲ್ಲಿ ವಾಸಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ವೀಸಾ ದಾಖಲೆಗಳು ಯುಎಸ್ ಕಾನೂನಿನ ಅಡಿಯಲ್ಲಿ ಗೌಪ್ಯವಾಗಿರುತ್ತವೆ. ಆದ್ದರಿಂದ, ನಾವು ವೈಯಕ್ತಿಕ ವೀಸಾ ಪ್ರಕರಣಗಳ ವಿವರಗಳನ್ನು ಚರ್ಚಿಸುವುದಿಲ್ಲ ಎಂದು ಢಾಕಾದಲ್ಲಿನ ಯುಎಸ್ ರಾಯಭಾರ ಕಚೇರಿಯ ವಕ್ತಾರರು ಮಂಗಳವಾರ ಹೇಳಿದ್ದಾರೆ. ಹೀಗಾಗಿ ಇಂಗ್ಲೆಂಡ್ ನಲ್ಲಿಯೂ ಅವರಿಗೆ ಸ್ಥಾನ ಸಿಗುವುದು ಡೌಟ್ ಎನ್ನಲಾಗುತ್ತಿದೆ. ಅಮೆರಿಕವು ಕೇವಲ ಶೇಕ್ ಹಸೀನಾ ಅಲ್ಲದೇ, ಅವರ ಪಕ್ಷದ ಸದಸ್ಯರಿಗೂ ತಮ್ಮ ದೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.