ಭಾರತೀಯ ಕುಸ್ತಿ ಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಕುಸ್ತಿ ಸ್ಪರ್ಧೆಯ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಜಪಾನ್ ನ ಯುಯಿ ಸುಸಾಕಿ ಅವರನ್ನು 16ನೇ ಸುತ್ತಿನಲ್ಲಿ ಸೋಲಿಸುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ.
ಅಷ್ಟೇ ಇಲ್ಲ ಸೋಲನ್ನೇ ಕಾಣದ ಸುಸಾಕಿ ವಿಶ್ವ ಚಾಂಪಿಯನ್ ಮತ್ತು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆದರೆ, ಈಗ ವಿನೇಶ್ ಫೋಗಟ್ ತಮ್ಮ ಮುಂದೆ ಮಂಡಿಯೂರುವಂತೆ ಮಾಡಿದ್ದಾರೆ. ಸುಸಾಕಿ ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಜಪಾನೀಸ್ ಅಲ್ಲದ ಎದುರಾಳಿಯ ವಿರುದ್ಧ ಸೋತಿದ್ದಾರೆ. ಅಷ್ಟೇ ಅಲ್ಲ, ಸುಸಾಕಿ 14 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಸೋಲು ಕಂಡಿದ್ದಾರೆ.
ಫೋಗಾಟ್ ಆರಂಭಿಕ ಸುತ್ತಿನ ನಂತರ 0-2 ರಿಂದ ಹಿಂದುಳಿದಿದ್ದು, ಕೊನೆಯ 12 ಸೆಕೆಂಡುಗಳ ವರೆಗೆ ಅದೇ ಸ್ಥಿತಿ ಇತ್ತು. ಆದರೆ, ಕೊನೆಯಲ್ಲಿ ಮಾಡು ಇಲ್ಲವೆ ಮಡಿ ಎಂಬಂತೆ ಕೊಸರಿಕೊಂಡು ಎದ್ದು ಸುಸಾಕಿಗೆ ಸೋಲಿನ ರುಚಿ ತೋರಿಸಿದ್ದಾರೆ. ವಿನೇಶ್ ಫೋಗಟ್ ಈಗ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಉಕ್ರೇನ್ ನ ಒಕ್ಸಾನಾ ಲಿವಾಚ್ ಎದುರು ಸ್ಪರ್ಧಿಸಲಿದ್ದಾರೆ. ವಿನೇಶ್ ಫೋಗಟ್ ಇದೇ ರೀತಿ ಪ್ರದರ್ಶನ ಮುಂದುವರೆಸಿದರೆ, ಚಿನ್ನದ ಪದಕಕ್ಕೆ ಮುತ್ತಿಕ್ಕುವುದು ಗ್ಯಾರಂಟಿ.
ವಿನೇಶ್ ಸಾಧನೆಗೆ ಭಾರತೀಯ ಕ್ರಿಕೆಟಿಗ ಮನೋಜ್ ತಿವಾರಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಮಾಜಿಕ ಖಾತೆಯಲ್ಲಿ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆಯಲು ಒಲಿಂಪಿಕ್ ಚಾಂಪಿಯನ್ ಮತ್ತು 4ನೇ ಬಾರಿ ವಿಶ್ವ ಚಾಂಪಿಯನ್, ಜಪಾನ್ ನ ಕುಸ್ತಿ ದಂತಕಥೆ ಯುಯಿ ಸುಸಾಕಿ ಅವರನ್ನು 2-0 ಅಂತರದಿಂದ ಸೋಲಿಸಿದರು! ಚೆನ್ನಾಗಿದೆ ಹುಡುಗಿ! ಚೆನ್ನಾಗಿದೆ!! ಎಂದು ಟ್ವೀಟ್ ಮಾಡಿದ್ದಾರೆ.