ಕೊಡಗು: ಸ್ನೇಹವೇ ಅಂತದ್ದು, ಆ ಬಂಧ ಬೆಳೆದರೆ ಸಾಕು, ಒಬ್ಬರನ್ನೊಬ್ಬರು ಬಿಟ್ಟು ಎಂದಿಗೂ ಇರುವುದಿಲ್ಲ. ಇಲ್ಲೂ ಕೂಡ ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರಲಾರದ ಸ್ನೇಹಿತರು. ಆದರೆ, ಈಗ ಜೊತೆಯಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.
ಕೊಡಗು ಜಿಲ್ಲೆಯ ಕೊಯನಾಡು ಬಳಿ ಈ ಘಟನೆ ನಡೆದಿದೆ. ಮೈಸೂರು ಮೂಲದ ಪವನ್ ಮತ್ತು ಮನೋಜ್ ಜೊತೆಯಲ್ಲೇ ಸಾವಿನ ಮನೆ ಸೇರಿದ ಆತ್ಮೀಯ ಸ್ನೇಹಿತರು ಎನ್ನಲಾಗಿದೆ. ಈ ಇಬ್ಬರೂ ಸ್ನೇಹಿತರು ಬೈಕ್ ನಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಹೊರಟಿದ್ದರು ಎನ್ನಲಾಗಿದೆ.
ಆದರೆ, ಭಾನುವಾರ ರಾತ್ರಿ ಮಡಿಕೇರಿ ತಾಲ್ಲೂಕಿನ ಕೊಯನಾಡು ಬಳಿ ಇವರ ಬೈಕ್ ಅಪಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇವರಿದ್ದ ಬೈಕ್ ರಸ್ತೆ ಬದಿಯ ಸಣ್ಣ ಸೇತುವೆಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಬೈಕ್ ಸಹಿತ ಇಬ್ಬರು ಹಾರಿ ಚರಂಡಿಗೆ ಬಿದ್ದಿದ್ದಾರೆ. ಇಬ್ಬರಿಗೂ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾತ್ರಿ ಆಗಿದ್ದರಿಂದ ಘಟನೆ ಯಾರಿಗೂ ಗೊತ್ತಾಗಿಲ್ಲ. ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸತ್ತು ಬಿದ್ದಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ.
ಕೂಡಲೇ ಸ್ಥಳಕ್ಕೆ ಬಂದ ಮಡಿಕೇರಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಮೃತರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.