ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ನಾಟಕೀಯ ಸೋಲಿಗೆ ಕಾರಣವಾಗಿದೆ.
ಹಲವಾರು ಅನುಭವಿಗಳಿಂದ ಕೂಡದ ಭಾರತ ಏಕದಿನ ತಂಡ, ಸರಣಿಯಲ್ಲಿ ಮಾತ್ರ ನಿರಾಸೆಯ ಪ್ರದರ್ಶನ ನೀಡುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ ತನ್ನ ಗೆಲುವನ್ನು ಕೈಯಾರೆ ಕೈಚೆಲ್ಲಿದ್ದ ಭಾರತ ತಂಡ ಗೆಲುವಿನ ಸನಿಹಕ್ಕೆ ಬಂದು ‘ಟೈ’ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ ಬಲೆಗೆ ಸಿಲುಕಿ ಸೋಲಿನ ಆಘಾತ ಎದುರಿಸಿದೆ. ಬಲಿಷ್ಠ ಭಾರತವನ್ನು ಮಣಿಸಿದ ಶ್ರೀಲಂಕಾ ತಂಡ ಎರಡನೇ ಪಂದ್ಯದಲ್ಲಿ 32 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಶ್ರೀಲಂಕಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಕೂಡ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಶ್ರೀಲಂಕಾದ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಅಚ್ಚರಿಯ ಪ್ರದರ್ಶನ ನೀಡಿ ಬರೋಬ್ಬರಿ 6 ವಿಕೆಟ್ ಪಡೆದರು. ವಾಂಡರ್ಸೆ ಅವರ ಈ ಪ್ರದರ್ಶನದಿಂದಾಗಿ ಭಾರತದ ನಾಯಕ ರೋಹಿತ್ ಶರ್ಮಾ ಅವರ ಅದ್ಭುತ ಅರ್ಧಶತಕ ವ್ಯರ್ಥವಾದಂತಾಯಿತು. ರೋಹಿತ್ ಬಿಟ್ಟರೆ, ಇನ್ನುಳಿದ ಯಾವ ಆಟಗಾರರು ಪ್ರತಿರೋಧ ಒಡ್ಡಲಿಲ್ಲ. ಒಂದು ಹಂತದಲ್ಲಿ ಅಕ್ಷರ್ ಪಟೇಲ್ ಹೋರಾಟ ನಡೆಸಿದ್ದರು.