ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.
ಭಾನುವಾರ ನಡೆದ ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಬ್ರಿಟನ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಭಾರತ ಹಾಕಿ ತಂಡ ಸೆಮಿಫೈನಲ್ ಗೆ ಪ್ರವೇಶಿಸಿದೆ.
ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆಯನ್ನು ಹಾಕಿ ತಂಡ ಮೂಡಿಸಿದೆ. 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್ ನಲ್ಲೂ ಇದೇ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸುವ ಮೂಲಕ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. ಈ ಬಾರಿಯೂ ಅದೇ ರೀತಿಯಾಗಿ ಭಾರತ ತಂಡವು ಬ್ರಿಟನ್ ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ಆದರೆ ಈ ಬಾರಿ ಎರಡೂ ತಂಡಗಳ ಮಧ್ಯೆ ಭಾರೀ ಪೈಪೋಟಿ ಕಂಡು ಬಂದಿತು. ಗ್ರೂಪ್ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಹಾಕಿ ತಂಡ ಈ ಪಂದ್ಯದಲ್ಲೂ ಅಮೋಘ ಆರಂಭ ನೀಡಿತ್ತಾದರೂ ಬ್ರಿಟನ್ ಆಟಗಾರರು ತೀವ್ರ ಪ್ರತಿರೋಧ ಒಡ್ಡಿದರು. ಹೀಗಾಗಿ ಫಲಿತಾಂಶವು ಶೂಟೌಟ್ ನಲ್ಲಿ ನಿರ್ಧಾರವಾಗುವಂತಾಯಿತು. ಕೊನೆಗೆ ಭಾರತ ತಂಡ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.