ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಂದು ಭಾರತೀಯರಿಬ್ಬರ ಮುಖಾಮುಖಿಯ ಕಾದಾಟ ನಡೆಯಲಿದೆ.
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಭಾರತೀಯ ಷಟ್ಲರ್ ಗಳಾದ ಲಕ್ಷ್ಯ ಸೇನ್ ಹಾಗೂ ಎಚ್.ಎಸ್. ಪ್ರಣಯ್ ಎದುರಾ ಎದುರು ಸೆಣಸಾಟ ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದವರು ಮುಂದಿನ ಹಂತಕ್ಕೇರಿದರೆ, ಸೋತವರು ಒಲಿಂಪಿಕ್ಸ್ ನಿಂದ ಹೊರ ಬೀಳಲಿದ್ದಾರೆ. ಹೀಗಾಗಿ ಸೋಲು-ಗೆಲವು ಎರಡೂ ಭಾರತದ ನಷ್ಟಕ್ಕೆ ಕಾರಣವಾಗಲಿದೆ. ಈ ಪಂದ್ಯದ ಮೂಲಕವೇ ಭಾರತೀಯರೊಬ್ಬರ ಅಭಿಯಾನ ಅಂತ್ಯವಾಗಲಿದೆ.
ಬುಧವಾರ ನಡೆದ ಸ್ಪರ್ಧೆಯಲ್ಲಿ ಶ್ರೇಯಾಂಕ ರಹಿತ ಲಕ್ಷ್ಯ ಸೇನ್ ಮೂರನೇ ಶ್ರೇಯಾಂಕದ ಜೊನಾಟನ್ ಕ್ರಿಸ್ಟಿ ವಿರುದ್ಧ 21-18, 21-12 ರಿಂದ ಅಭೂತಪೂರ್ವ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಹೆಚ್.ಎಸ್. ಪ್ರಣಯ್ ವಿಯೆಟ್ನಾಂನ ಲೆ ಡಕ್ ಫಾಟ್ ವಿರುದ್ಧ 16-21, 21-11, 21-12 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಇಬ್ಬರೂ ಭಾರತೀಯ ಆಟಗಾರರೇ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಇದು ಕೂಡ ಭಾರತೀಯರ ಬೇಸರಕ್ಕೆ ಕಾರಣವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪುರುಷ ಬ್ಯಾಡ್ಮಿಂಟನ್ ನಲ್ಲಿ ಭಾರತದಿಂದ ಲಕ್ಷ್ಯ ಸೇನ್ ಹಾಗೂ ಹೆಚ್ ಎಸ್ ಪ್ರಣಯ್ ಅರ್ಹತೆ ಪಡೆದುಕೊಂಡಿದ್ದರು. ಮೊದಲ ಸುತ್ತಿನಲ್ಲಿ ಪ್ರಣಯ್ K ಗ್ರೂಪ್ನಲ್ಲಿ ಕಣಕ್ಕಿಳಿದರೆ, ಲಕ್ಷ್ಯ ಸೇನ್ L ಗ್ರೂಪ್ ನಲ್ಲಿ ಆಡಿದ್ದರು. ಈಗ ಗ್ರೂಪ್ ಹಂತ ಮುಗಿದು ರೌಂಡ್-16 ಗೆ ತಲುಪಿದೆ. ಆಯಾ ಗ್ರೂಪ್ನಿಂದ ಅರ್ಹತೆ ಪಡೆದ ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಾರೆ. ಲಕ್ಷ್ಯ ಸೇನ್ ಹಾಗೂ ಪ್ರಣಯ್ ಇಲ್ಲಿಯವರೆಗೆ 7 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಪ್ರಣಯ್ 3 ಬಾರಿ ಜಯ ಸಾಧಿಸಿದರೆ, ಉಳಿದ ಪಂದ್ಯಗಳಲ್ಲಿ ಲಕ್ಷ್ಯ ಸೇನ್ ಗೆದ್ದಿದ್ದಾರೆ.
ಇಂದು ಬ್ಯಾಡ್ಮಿಂಟನ್ ವಿಭಾಗದಲ್ಲಿ
• 4:30 PM IST- ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ vs ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ (ಮಲೇಷ್ಯಾ)
• 5:40 PM IST – ಪುರುಷರ ಸಿಂಗಲ್ಸ್: ಲಕ್ಷ್ಯ ಸೇನ್ vs ಹೆಚ್ಎಸ್ ಪ್ರಣಯ್
• 10 PM ರಿಂದ – ಮಹಿಳೆಯರ ಸಿಂಗಲ್ಸ್: ಪಿವಿ ಸಿಂಧು vs ಹೆ ಬಿಂಗ್ ಜಿಯಾವೊ ಕಣಕ್ಕೆ ಇಳಿಯಲಿದ್ದಾರೆ.