ಇತ್ತೀಚೆಗೆ ನಾಯಿ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವರಂತೂ ಮನೆಯ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯನ್ನು ನಾಯಿಯ ಮೇಲೆ ಇಟ್ಟುಕೊಂಡಿರುತ್ತಾರೆ. ಪ್ರೀತಿಯಿಂದ ಸಿಕ್ಕಿದ್ದೆಲ್ಲ ತಿನ್ನಿಸುತ್ತಿರುತ್ತಾರೆ. ತಾವು ಎಲ್ಲಿಗೆ ಹೋಗುತ್ತಾರೆ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ. ಹೀಗೆ ನಾಯಿಗೆ ಸಿಕ್ಕಿದ್ದೆಲ್ಲ ತಿನ್ನಿಸಿ, ಮಹಿಳೆಯೊಬ್ಬರು ಜೈಲು ಪಾಲಾಗಿದ್ದಾರೆ.
ಮಹಿಳೆಯು ನಾಯಿಗೆ ಸಿಕ್ಕಿದ್ದೆಲ್ಲ ತಿನ್ನಿಸಿದ್ದರಿಂದಾಗಿ ಅದು ಸಾವನ್ನಪ್ಪಿದೆ. ಹೀಗಾಗಿ ಮಹಿಳೆಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ ನ್ಯೂಜಿಲೆಂಡ್ ನಲ್ಲಿ ನಡೆದಿದೆ. ತನ್ನ ನಾಯಿಯ ವೈದ್ಯಕೀಯ ಮತ್ತು ದೈಹಿಕ ಅಗತ್ಯಗಳನ್ನು ಪೂರೈಸಲು ವಿಫಲರಾದ ಮಹಿಳೆಗೆ 720 ಡಾಲರ್ ದಂಡ ವಿಧಿಸಲಾಗಿದೆ. ಮತ್ತು ಒಂದು ವರ್ಷದವರೆಗೆ ನಾಯಿಯನ್ನು ಸಾಕದಂತೆ ನಿರ್ಬಂಧ ಕೂಡ ವಿಧಿಸಲಾಗಿದೆ.
ಬೀದಿ ನಾಯಿಗಳು ಹಸಿವಿನಿಂದ ಬಳಲುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ಹೆಚ್ಚು ತಿನ್ನಿಸಿದ್ದಕ್ಕೆ ಮಹಿಳೆ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. 2021ರಲ್ಲಿ ಪೊಲೀಸರು ಮಹಿಳೆ ಮನೆಗೆ ಹೋದಾಗ ನುಗ್ಗಿ ಎನ್ನುವ ನಾಯಿ ಅಲ್ಲಿತ್ತು. ನುಗ್ಗಿ ಹೆಚ್ಚು ತೂಕ ಹೊಂದಿತ್ತು. ನಡೆದಾಡಲು ಕೂಡ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಆರಂಭದಲ್ಲಿ ನುಗ್ಗಿ 54 ಕೆಜಿ ತೂಕ ಹೊಂದಿತ್ತು. ನಂತರ ಎರಡು ತಿಂಗಳ ಅವಧಿಯಲ್ಲಿ 8.8 ಕೆಜಿ ತೂಕ ಹೆಚ್ಚಾಗಿದೆ. ನಂತರ ಯಕೃತ್ತಿನಲ್ಲಿ ರಕ್ತಸ್ರಾವ ಉಂಟಾಗಿದೆ. ಆನಂತರ ನಾಯಿ ಸತ್ತಿದೆ. ಶವ ಪರೀಕ್ಷೆಯಲ್ಲಿ ಕುಶಿಂಗ್ಸ್ ಕಾಯಿಲೆ ಮತ್ತು ಯಕೃತ್ತಿನ ಸಮಸ್ಯೆಗಳು ಸೇರಿದಂತೆ ಹೆಚ್ಚು ರೋಗಗಳಿರುವುದು ಕಂಡು ಬಂದಿದೆ. ನುಗ್ಗಿಗೆ ಆಹಾರದ ಜತೆ ಪ್ರತಿದಿನ ಹತ್ತು ಚಿಕನ್ ತುಂಡುಗಳನ್ನು ಹಾಕಲಾಗುತ್ತಿತ್ತು ಎಂಬುವುದು ತಿಳಿದು ಬಂದಿದೆ.
ಜವಾಬ್ದಾರಿಯುತ ಮಾಲೀಕರಾದರೆ ನಾಯಿಗೆ ಸೂಕ್ತವಾದ ಆಹಾರವನ್ನು ಕೊಡುವುದಷ್ಟೇ ಅಲ್ಲದೆ ಅವುಗಳ ವ್ಯಾಯಾಮ, ಫಿಟ್ನೆಸ್ ಬಗೆಗೂ ಹೆಚ್ಚು ಗಮನಕೊಡುತ್ತಾರೆ. ಆದರೆ ಈ ನಾಯಿಯ ಮಾಲೀಕರು ಅದಕ್ಕೆ ಹೊಟ್ಟೆ ಬಿರಿಯುವಷ್ಟು ಆಹಾರ ತಿನ್ನಿಸಿ ಅದಕ್ಕೆ ನಡೆಯಲು ಶಕ್ತಿ ಇಲ್ಲದಂತೆ ಮಾಡಿದ್ದಾರೆ. ನುಗ್ಗಿ ತೂಕದಿಂದಾಗಿ ಅದರ ಹೃದಯ ಬಡಿತ ಪತ್ತೆ ಹಚ್ಚುವುದೇ ಕಷ್ಟವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ನಾಯಿಯ ಮಾಲೀಕರಿಗೆ ಶಿಕ್ಷೆ ವಿಧಿಸಲಾಗಿದೆ.