ಪ್ಯಾರಿಸ್ ಒಲಿಂಪಿಕ್ಸ್ ನ ಕೆಲವು ಕ್ರೀಡೆಗಳಲ್ಲಿ ಭಾರತೀಯ ಆಟಗಾರರು ನೀರಸ ಪ್ರದರ್ಶನ ತೋರುತ್ತಿದ್ದಾರೆ. ಇನ್ನೂ ಕೆಲವು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತದ ಮಣಿಕಾ ಬಾತ್ರಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸೋಮವಾರ ನಡೆದ ಮಹಿಳಾ ಸಿಂಗಲ್ಸ್ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಮಣಿಕಾ ಬಾತ್ರಾ ಹಾಗೂ ಫ್ರಾನ್ಸ್ ನ ಪ್ರಿತಿಕಾ ಪವಾಡೆಯನ್ನು ಸೋಲಿಸುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.

ಜಿದ್ದಾಜಿದ್ದಿಯಿಂದ ಕೂಡಿದ ಈ ಪಂದ್ಯದ ಮೊದಲ ಸೆಟ್ ನ್ನು ಮಣಿಕಾ ಬಾತ್ರಾ 11-9 ಸ್ಕೋರ್ ಗಳ ಅಂತರದಿಂದ ಗೆದ್ದುಕೊಂಡರು. ಎರಡನೇ ಸೆಟ್ ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಮಣಿಕಾ ಬಾತ್ರಾ 11-6 ಅಂತರದಿಂದ ಸುಲಭ ಗೆಲುವು ಸಾಧಿಸಿದರು. ಮೂರನೇ ಸೆಟ್ ನಲ್ಲಿ ಪ್ರಿತಿಕಾ ಪವಾಡೆ ಕಡೆಯಿಂದ ಉತ್ತಮ ಹೋರಾಟ ಕಂಡು ಬಂದಿತು. ಆದರೂ 11-9 ಸ್ಕೋರ್ ಗಳ ಅಂತರದಿಂದ ಸೆಟ್ ಗೆಲ್ಲುವಲ್ಲಿ ಮಣಿಕಾ ಯಶಸ್ವಿಯಾಗಿದ್ದಾರೆ. ಕೊನೆಯ ಸೆಟ್ ನಲ್ಲಿ 11-7 ಅಂಕ ಗಳಿಸಿ 4-0 ಅಂತರದ ಜಯ ಸಾಧಿಸಿ ಮಣಿಕಾ ಬಾತ್ರಾ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಈ ಮೂಲಕ ಒಲಿಂಪಿಕ್ ಇತಿಹಾಸದಲ್ಲಿಯೇ ಸಿಂಗಲ್ಸ್ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಮೊದಲ ಟೇಬಲ್ ಟೆನ್ನಿಸ್ ಆಟಗಾರ್ತಿ ಎಂಬ ದಾಖಲೆಯನ್ನು ಮಣಿಕಾ ಬಾತ್ರಾ ಬರೆದಿದ್ದಾರೆ.