ಬೆಂಗಳೂರು: ಬಜೆಟ್ ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಯಾವುದೇ ಅನುದಾನ ನೀಡಿಲ್ಲ ಎಂಬ ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಳು ಆಪಾದನೆಗಳ ‘ಚೊಂಬು ನಾಟಕ’ ನಿಲ್ಲಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದ್ದಾರೆ. ಅಲ್ಲದೇ, ಈ ಬಾರಿಯ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರು ಮತ್ತು ಕರ್ನಾಟಕಕ್ಕೆ ಗರಿಷ್ಠ ಪ್ರಯೋಜನ ಸಿಕ್ಕಿದೆ. ತೆರಿಗೆ ಹಂಚಿಕೆ, ಅನುದಾನದ ಜತೆಗೆ, ನಾನಾ ಯೋಜನೆಗಳ ಪ್ರಯೋಜನ ಕರ್ನಾಟಕಕ್ಕೆ ಸಿಗುತ್ತಿದೆ.
ಕಲಬುರಗಿಯಲ್ಲಿ ‘ಪಿಎಂ ಮಿತ್ರಾ ಪಾರ್ಕ್’ ನಿರ್ಮಾಣವಾಗಲಿದ್ದು, ತುಮಕೂರಲ್ಲಿ ಮೊದಲ ಕೈಗಾರಿಕಾ ಕಾರಿಡಾರ್ ಪಾರ್ಕ್, 7 ಸ್ಮಾರ್ಟ್ ಸಿಟಿ ಯೋಜನೆಗಳು ಕಾರ್ಯಗತವಾಗುತ್ತಿವೆ. ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಲಾಗಿದ್ದು, 47,016 ಕೋಟಿ ಮೊತ್ತದ 31 ಯೋಜನೆಯ ರೈಲ್ವೆ ಕಾಮಗಾರಿ ನಡೆಯುತ್ತಿದೆ. ಹೆದ್ದಾರಿಗಳ ನಿರ್ಮಾಣಕ್ಕೆ ಅನುದಾನ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಉದ್ದಿಮೆಗಳ ಉತ್ತೇಜನಕ್ಕಾಗಿ ರಫ್ತು ಹಬ್ ತೆರೆಯಲಾಗುತ್ತಿದೆ. ದುಡಿಯುವ ಬಂಡವಾಳಕ್ಕೆ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲದ ಜತೆಗೆ, ಹೆಚ್ಚುವರಿ ಭದ್ರತೆ ಇಲ್ಲದೆ ಯಂತ್ರೋಪಕರಣ, ಪೂರಕ ಉಪಕರಣ ಖರೀದಿಗೆ ಸಾಲ ಸೌಲಭ್ಯ ನೀಡಲಾಗುವುದು. ಯುವಜನರಿಗೆ ಉದ್ಯೋಗ ಸೃಷ್ಟಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣಕ್ಕೆ 10 ಲಕ್ಷ ರೂ. ಸಾಲ ನೀಡಿಕೆಯಿಂದ ಮಧ್ಯಮ ವರ್ಗದ ಮಕ್ಕಳಿಗೂ ಅನುಕೂಲವಾಗಲಿದೆ. ಆವಾಸ್ ಯೋಜನೆಯಡಿ ಬಡ ವರ್ಗದ ಜನರಿಗೆ ಮನೆ ನೀಡಲಾಗುತ್ತಿದ್ದು, ಮಹಿಳೆಯರು ಮತ್ತು ಕೃಷಿ ವಲಯಕ್ಕೂ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರಕಾರ ಎಲ್ಲದರಲ್ಲೂ ತೆರಿಗೆ ಹೆಚ್ಚಿಸಿದ್ದು, ಸಹಜವಾಗಿ ಹಣದುಬ್ಬರ ಎದ್ದು ಕಾಣುತ್ತಿದೆ. ಬೃಹತ್ ಹೂಡಿಕೆ ಕಂಪನಿಗಳು ಹೊರರಾಜ್ಯಕ್ಕೆ ಹೋಗುತ್ತಿವೆ. ಪರಿಶಿಷ್ಟರ ಉಪಯೋಜನೆ ಹಣ ದುರ್ಬಳಕೆಯಾಗುತ್ತಿದ್ದು, ಅಕ್ರಮ, ಹಗರಣಗಳ ಸರಣಿ ಒಂದೊಂದಾಗಿ ಹೊರಬರುತ್ತಿವೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ದಾಖಲಿಸಬೇಕಿತ್ತು. ಸಭೆಯಿಂದ ಹೊರಗುಳಿಯುವ ಮೂಲಕ ತಮ್ಮ ಅಭಿಪ್ರಾಯ ತಿಳಿಸುವ ಅವಕಾಶ ಕಳೆದುಕೊಂಡಿದ್ದಾರೆ. ಶುದ್ಧ ಹಸ್ತ ಎಂಬಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ಅವರು ಮುಡಾ ಹಗರಣದಲ್ಲಿ ತಮ್ಮ ವಿರುದ್ಧದ ಆಪಾದನೆಗೆ ಸ್ಪಷ್ಟನೆ ನೀಡುವ ಬದಲು, ಪ್ರತ್ಯಾರೋಪ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.