ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಅವರ ಮೂಗಿನಿಂದ ರಕ್ತಸ್ರಾವವಾದ ಘಟನೆ ನಡೆದಿದೆ.
ಮುಡಾ ಹಾಗೂ ವಾಲ್ಮೀಕಿ ಹಗರಣ ಮುಂದಿಟ್ಟುಕೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು? ಹಾಗೂ ರಾಜ್ಯ ಸರ್ಕಾರವನ್ನು ಯಾವ ರೀತಿ ಕಟ್ಟಿಹಾಕಬೇಕು ಎಂದು ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ತಂತ್ರ ರೂಪಿಸುವ ನಿಟ್ಟಿನಲ್ಲಿ ಸಭೆ ನಡೆಸಿ, ಪಾದಯಾತ್ರೆ ಕೈಗೊಳ್ಳುವ ತೀರ್ಮಾನ ಕೈಗೊಂಡಿತ್ತು. ಇದಕ್ಕಾಗಿ ನಾಯಕರ ಸಭೆ ನಡೆಸಿತ್ತು. ಈ ಸಭೆಯ ನಂತರ ನಡೆದ ಸುದ್ದಿಗೋಷ್ಠಿ ವೇಳೆ ಏಕಾಏಕಿ ಕುಮಾರಸ್ವಾಮಿ ಅವರ ಮೂಗಿನಲ್ಲಿ ರಕ್ತಸ್ರಾವವಾಗಿದೆ.
ಸುದ್ದಿಗೋಷ್ಠಿ ಸಂದರ್ಭದಲ್ಲಿಯೇ ದಿಢೀರ್ ಮೂಗಿನಲ್ಲಿ ರಕ್ತಸ್ರಾವವಾಗಿದೆ. ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪುತ್ರ ನಿಖಿಲ್ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದಾರೆ. ರಕ್ತ ಸುರಿಯುತ್ತಿರುವುದನ್ನು ನೋಡಿ ಯಡಿಯೂರಪ್ಪ ಸೇರಿದಂತೆ ಇತರೆ ನಾಯಕರು ಗಾಬರಿಯಾಗಿದ್ದಾರೆ.
ರಕ್ತಸ್ರಾವವಾಗುತ್ತಿದ್ದಂತೆ ಕುಮಾರಸ್ವಾಮಿ ಬಟ್ಟೆಯಿಂದ ಮೂಗನ್ನು ಪದೇ ಪದೇ ಒರೆಸಿಕೊಂಡಿದ್ದಾರೆ. ಅದರೂ ರಕ್ತ ಸೋರುವಿಕೆ ಮಾತ್ರ ನಿಂತಿಲ್ಲ. ಮೂಗಿನಿಂದ ರಕ್ತಸ್ರಾವ ಹೆಚ್ಚಾಗಿದ್ದು, ಬಿಳಿ ಶರ್ಟ್ ರಕ್ತಮಯವಾಗಿತ್ತು. ಇದನ್ನು ನೋಡಿ ಪುತ್ರ ನಿಖಿಲ್ ಕುಮಾರಸ್ವಾಮಿ ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕುಟಂಬಸ್ಥರು ಹಾಗೂ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡಿದೆ.