ಗೂಗಲ್ ಮ್ಯಾಪ್ಸ್ ಭಾರತೀಯ ಬಳಕೆದಾರರಿಗೆ 6 ಹೊಸ ಫೀಚರ್ ಬಿಡುಗಡೆ ಮಾಡಿದೆ.
ಎಐ ತಂತ್ರಜ್ಞಾನ ಹಾಗೂ ಸ್ಥಳೀಯ ಸಹಭಾಗಿತ್ವದ ಸಹಾಯದೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಫೀಚರ್ ಹಲವು ಸಮಸ್ಯೆಗಳಿಗೆ ಮುಕ್ತಿ ಹಾಡಿದೆ. ಮ್ಯಾಪ್ಸ್ ಬಳಕೆದಾರರಿಗೆ ಉತ್ತಮ ಪ್ರಯಾಣದ ಅನುಭವ ನೀಡುವುದರ ಜೊತೆಗೆ ಅವರ ಸಾಮಾನ್ಯ ಸಮಸ್ಯೆಗಳ ನಿವಾರಣೆಗೆ ಸಂಸ್ಥೆ ಸದಾ ಬದ್ಧವಾಗಿದೆ ಎಂದು ಗೂಗಲ್ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಸಣ್ಣಸಣ್ಣ ಕಿರಿದಾದ ರಸ್ತೆಗಳನ್ನು ಪತ್ತೆ ಹಚ್ಚಿ ಬೈಪಾಸ್ ಗೆ ಸೇರಿಸಿ ಬದಲಿ ಮಾರ್ಗವನ್ನು ತೋರಿಸುವ ಸವಲತ್ತನ್ನು ಗೂಗಲ್ ಮ್ಯಾಪ್ಸ್ ಅಳವಡಿಸಲಾಗಿದೆ. ಇಲ್ಲಿಯವರೆಗೆ ಗೂಗಲ್ ಮ್ಯಾಪ್ ಕಡಿಮೆ ದೂರ ಮತ್ತು ಸಮಯದಲ್ಲಿ ನಿಗದಿತ ಸ್ಥಳವನ್ನು ತಲುಪುವುದಕ್ಕೆ ಪ್ರಾಶಸ್ತ್ಯ ನೀಡುತ್ತಿತ್ತು. ಹೀಗಾಗಿ ಕಿರಿದಾದ ರಸ್ತೆಗಳಲ್ಲಿ ಸಿಕ್ಕಿ ಹಾಕಿಕೊಂಡು ಪಾಡು ಪಡುತ್ತಿದ್ದರು. ಮುಖ್ಯವಾಗಿ ಫೋರ್ ವೀಲರ್ ಸವಾರರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಿದ್ದರು. ಹೀಗಾಗಿ ಹಿರಿದಾದ ರಸ್ತೆ, ಉತ್ತಮ ರಸ್ತೆಗಳತ್ತ ಪ್ರಯಾಣಿಕರನ್ನು ಕೊಂಡೊಯ್ಯಲು ಪ್ರಾಶಸ್ತ್ಯ ನೀಡಲಾಗಿದೆ.

ವಾಹನ ಸವಾರರಿಗೆ ಪ್ಲೈಓವರ್ ಬಂದಾಗ ಅದನ್ನು ಏರಬೇಕೋ? ಅಥವಾ ಪಕ್ಕದ ರಸ್ತೆಯಲ್ಲಿ ಸಾಗಬೇಕೋ? ಎಂಬ ಗೊಂದಲ ಮ್ಯಾಪ್ ಬಳಕೆ ಮಾಡುತ್ತಿದ್ದ ಪ್ರತಿಯೊಬ್ಬ ಸವಾರರಿಗೂ ಆಗಿದೆ. ಹೀಗಾಗಿಯೇ ಗೂಗಲ್ ಮ್ಯಾಪ್ ಇದನ್ನು ಗಮನದಲ್ಲಿಟ್ಟುಕೊಂಡು ಹೊಸ ಸವಲತ್ತಿನಲ್ಲಿ ಪರಿಹಾರ ಅಭಿವೃದ್ಧಿ ಪಡಿಸಿದೆ. ಫ್ಲೈ ಓವರ್‌ಗಳನ್ನು ಹೈಲೈಟ್ ಮಾಡುವುದರ ಜೊತೆಗೆ ಬಳಕೆದಾರರಿಗೆ ಮಾರ್ಗದ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದೆ.
ಪೆಟ್ರೋಲ್ ಬಂಕ್‌ಗಳ ಮಾಹಿತಿಯನ್ನು ತೋರುವಂತೆಯೇ ಗೂಗಲ್ ಮ್ಯಾಪ್ಸ್ ಇವಿ ಚಾರ್ಜಿಂಗ್ ಸ್ಟೇಷನ್‌ಗಳ ಮಾಹಿತಿ ನೀಡಲಿದೆ. ಇದರಿಂದ ಚಾರ್ಚಿಂಗ್ ವಾಹನಗಳಿಗೆ ಅನುಕೂಲ ಮಾಡಿಕೊಡುವ ಕಾರ್ಯ ಮಾಡುತ್ತಿದೆ. ದೇಶಾದ್ಯಂತ ಸುಮಾರು 8,000ಕ್ಕೂ ಅಧಿಕ ಚಾರ್ಜಿಂಗ್ ಸ್ಟೇಷನ್‌ಗಳ ಮಾಹಿತಿಯನ್ನು ಮ್ಯಾಪ್ಸ್‌ನಲ್ಲಿ ಅಳವಡಿಸಿದೆ.
ಮೆಟ್ರೊ ರೈಲುಗಳ ಟಿಕೆಟ್ ಬುಕಿಂಗ್ ಸವಲತ್ತನ್ನು ನೇರವಾಗಿ ಗೂಗಲ್ ಮ್ಯಾಪ್ಸ್ ಒಳಗಡೆ ನೀಡಲಾಗಿದೆ. ಗೂಗಲ್ ಮ್ಯಾಪ್ಸ್ ಬಳಕೆದಾರರು ಮೆಟ್ರೊ ರೈಲು ಟಿಕೆಟ್ ಬುಕಿಂಗ್ ಅನ್ನು ಗೂಗಲ್ ಮ್ಯಾಪ್ಸ್ ಆ್ಯಪ್‌ನಲ್ಲಿಯೇ ಮಾಡಬಹುದಾಗಿದೆ. ಮ್ಯಾಪ್ಸ್‌ನಲ್ಲಿದ್ದ ‘ಲೋಕಲ್ ರೆಕಮಂಡೇಷನ್'(ಸ್ಥಳೀಯ ಆಕರ್ಷಣೆಗಳು) ಸವಲತ್ತನ್ನು ಇನ್ನಷ್ಟು ಸುಧಾರಣೆಗೊಳಿಸಿದೆ.
ಮ್ಯಾಪ್ಸ್ ಬಳಕೆದಾರರು ಮಾರ್ಗ ಮಧ್ಯೆ ರಸ್ತೆ ಅವಘಡ, ರಸ್ತೆ ಬಂದ್ ಅಥವಾ ಇನ್ನಿತರ ರಸ್ತೆ ಸಂಬಂಧಿ ಸಮಸ್ಯೆಗಳ ಮಾಹಿತಿಯನ್ನು ಸುಲಭವಾಗಿ ವರದಿ ಮಾಡುವ ವ್ಯವಸ್ಥೆಯನ್ನು ಗೂಗಲ್ ಮ್ಯಾಪ್ಸ್ ರೂಪಿಸಿದೆ. ವಾಹನ ಸವಾರರ ಸ್ನೇಹಿಯಾಗುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ ಹಲವಾರು ಮಾರ್ಪಡುಗಳನ್ನು ಮಾಡಿಕೊಂಡಿದ್ದು, ಸವಾರರಿಗೆ ಯಾವ ರೀತಿ ಅನುಕೂಲ ಮಾಡಲಿದೆ ಎಂಬುವುದನ್ನು ನೋಡಬೇಕಿದೆ.