ಬೆಂಗಳೂರು: ರ‍್ಯಾಪಿಡೋ ಬೈಕ್ ಸವಾರನನ್ನು ಆಟೋ ಚಾಲಕರು ಮನಬಂದಂತೆ ಥಳಿಸಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರಿಂದ ಬೈಕ್ ಸವಾರ ಹೆಚ್ಚಿನ ಹಲ್ಲೆಗೊಳಗಾಗುವುದನ್ನು ತಪ್ಪಿಸಿದ್ದಾರೆ. ಬಸವನಪುರದ ನಿವಾಸಿ ನವೀನ್ (27) ವ್ಯಕ್ತಿಯೇ ಆಟೋ ಚಾಲಕರ ಹಲ್ಲೆಗೆ ಒಳಗಾಗಿರುವ ವ್ಯಕ್ತಿ.
ಈತ ಜುಲೈ 21ರಂದು ಮಹಿಳಾ ಪ್ರಯಾಣಿಕರೊಬ್ಬರನ್ನು ಪಿಕಪ್ ಮಾಡಲು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ. ಇದನ್ನು ಗಮನಿಸಿದ 6 ಜನ ಆಟೋ ಚಾಲಕರು ನವೀನ್ ಜತೆ ಜಗಳ ಆರಂಭಿಸಿದ್ದಾರೆ. ಪ್ರಯಾಣಿಕರನ್ನು ಕರೆದೊಯ್ಯುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ್ದಾರೆ. ಮನಬಂದಂತೆ ನವೀನ್ ಮೇಲೆ ಹಲ್ಲೆ ನಡೆಸಿದ್ದಾರೆ.
ಅದೃಷ್ಟವಶಾತ್ ಡಿಸಿಪಿ ದೇವರಾಜು ಅದೇ ಮಾರ್ಗದಲ್ಲಿ ತಮ್ಮ ಕಚೇರಿಗೆ ತೆರಳುತ್ತಿದ್ದಾಗ ಆಟೋ ಚಾಲಕರ ಹಲ್ಲೆ ಕೃತ್ಯ ಗಮನಿಸಿದ್ದಾರೆ. ಡಿಸಿಪಿ ಹಾಗೂ ಪೊಲೀಸರು ಕೆಳಗೆ ಇಳಿಯುತ್ತಿದ್ದಂತೆ ಆಟೋ ಚಾಲಕರು ಓಡಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ್ದ ಹಲವು ಆಟೋಚಾಲಕರನ್ನು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಚದುರಿಸಿದ್ದಾರೆ. ಸದ್ಯ ಹಲ್ಲೆಗೊಳಗಾದ ನವೀನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನವೀನ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಆರೋಪಿತ ಆಟೋ ಚಾಲಕರ ಪತ್ತೆಗೆ ಬಲೆ ಬೀಸಿದ್ದಾರೆ.