ದಾಂಬುಲಾ: ಏಷ್ಯಾಕಪ್ ಟಿ20 ಮಹಿಳಾ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿದೆ.
‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಭಾರತ ತಂಡ ನೇಪಾಳ ವಿರುದ್ಧ 82 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ನೇಪಾಳ ತಂಡ ಗುಂಪು ಹಂತದಲ್ಲಿಯೇ ಹೊರ ಬಿದ್ದಿದೆ. ಮೊದಲು ಬ್ಯಾಟ್ ಮಾಡಿದ ಭಾರತ 3 ವಿಕೆಟ್ ಗೆ 178 ರನ್ ಗಳಿಸಿತ್ತು. ಶಫಾಲಿ ವರ್ಮಾ 48 ಎಸೆತಗಳಲ್ಲಿ 81 ರನ್ ಗಳಿಸಿದರೆ, ದಯಾಳನ್ ಹೇಮಲತಾ 47, ಜೆಮಿಮಾ ರೋಡ್ರಿಗ್ಸ್ 28 ರನ್ ಗಳಿಸಿ ತಂಡದ ಮೊತ್ತ ಹಿಗ್ಗುವಂತೆ ಮಾಡಿದರು.
ಗುರಿಯನ್ನು ಬೆನ್ನತ್ತಿದ ನೇಪಾಳ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 96 ರನ್ ಗಳಿಸಿ ಸೋಲು ಅನುಭವಿಸಿದೆ.
ಭಾರತದೊಂದಿಗೆ ಮೊದಲ ಪಂದ್ಯ ಸೋತ ಪಾಕ್, ನಂತರ ಎರಡು ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಪಾಕ್ ತಂಡ ಯುಎಇ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿದೆ. ಯುಎಇ ಸತತ 3 ಪಂದ್ಯಗಳ ಸೋಲಿನೊಂದಿಗೆ ‘ಎ’ ಗುಂಪಿನಲ್ಲಿ ಕೊನೆ ಸ್ಥಾನಿಯಾಗಿ ಹೊರ ಹೋಗಿದೆ.