ಹುಬ್ಬಳ್ಳಿ: ಕೆಎಸ್ ಆರ್ ಟಿಸಿ ಚಾಲಕನ ರೀಲ್ಸ್(Reels) ಹುಚ್ಚಿಗೆ ಕುಟುಂಬವೊಂದು ಬೀದಿಗೆ ಬಿದ್ದಿರುವ ಘಟನೆ ನಡೆದಿದೆ.
ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತು ಬಲಿಯಾಗಿದ್ದು, ಓರ್ವ ರೈತ (Farmer)ನ ಮೆದುಳು ನಿಷ್ಕ್ರೀಯವಾಗಿದೆ. ಈ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಹತ್ತಿರ ನಡೆದಿದೆ. ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿದ್ದ ವೇಳೆ ಬಸ್ ಚಾಲಕ ರೀಲ್ಸ್ ಮಾಡಲು ಆರಂಭಿಸಿದ್ದಾನೆ. ಆಗ ಅದೇ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಚಕ್ಕಡಿಯನ್ನು ಗಮನಿಸಿದೆ ರೀಲ್ಸ್ ಗುಂಗಿನಲ್ಲಿದ್ದ ಚಾಲಕ, ಹಿಂಬದಿಯಿಂದ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದಾನೆ.
ಬಸ್ ಡಿಕ್ಕಿಯಾದ ರಭಸಕ್ಕೆ ಎರಡು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿವೆ. ರೈತನಿಗೆ ಗಂಭೀರ ಗಾಯವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗಾಯಗೊಂಡಿದ್ದ ರೈತ ಮಂಜುನಾಥ್ ರಂಗಪ್ಪ ಹೆಗ್ಗಣ್ಣವರ ಅವರ ಮೆದಳು ನಿಷ್ಕ್ರೀಯವಾಗಿದೆ. ರೈತ ಮಂಜುನಾಥ, ಮೆದುಳಿನಲ್ಲಿ ಬ್ಲಡ್ ಬ್ಲಾಕ್ ಆಗಿದೆ ಎಂದು ವೈದ್ಯರು ಹೇಳಿದ್ದಾರೆ.

ಅಲ್ಲದೇ, ರೈತ ಮಂಜುನಾಥ್ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಮನೆಗೆ ಆಧಾರವಾಗಿದ್ದ ಮಂಜುನಾಥ್ ನಿಷ್ಕ್ರೀಯವಾಗಿದ್ದರೆ, ಆಸರೆಯಾಗಿದ್ದ ಎತ್ತುಗಳು ಇಲ್ಲವಾಗಿವೆ. ಇದರಿಂದಾಗಿ ಕುಟುಂಬ ಬೀದಿಗೆ ಬಿದ್ದಿದೆ. ಸರ್ಕಾರ ಮಧ್ಯೆ ಪ್ರವೇಶಿಸಿ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.