ಮಾಜಿ ಕ್ರಿಕೆಟಿಗರೊಬ್ಬರನ್ನು ಮನೆಗೆ ನುಗ್ಗಿ ಅವರ ಪತ್ನಿ, ಮಕ್ಕಳ ಎದುರೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಶ್ರೀಲಂಕಾದ ಗಾಲೆ ನಗರದ ಅಂಬಲಂಗೋಡದಲ್ಲಿ ಈ ಘಟನೆ ನಡೆದಿದೆ. 41 ವರ್ಷದ ಧಮ್ಮಿಕಾ ನಿರೋಶನ ಹತ್ಯೆಯಾದವರು. ಕೊಲೆಯಾಗಿರುವ ನಿರೋಶನ ಅವರು ಶ್ರೀಲಂಕಾದ ಅಂಡರ್ 19 ತಂಡದ ನಾಯಕರೂ ಆಗಿದ್ದರು.

ಮಾಹಿತಿಯಂತೆ, ಮಂಗಳವಾರ ರಾತ್ರಿ ನಿರೋಶನ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಪತ್ನಿ ಮತ್ತು ಮಕ್ಕಳ ಎದುರೇ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಿರೋಶನ ಮೇಲೆ ಗುಂಡಿನ ದಾಳಿ ನಡೆದಾಗ ಆತನ ಪತ್ನಿ ಮತ್ತು ಮಕ್ಕಳು ಸಹ ಮನೆಯಲ್ಲಿದ್ದರು. ಆಗ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಇದರಿಂದ ನಿರೋಶನ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿಯವರೆಗೆ ಕೊಲೆ ಮಾಡಿರುವ ಅಪರಿಚತ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರಿಂದ ಆಗಿಲ್ಲ. ಆದರೆ, ತನಿಖೆ ಕೈಗೊಂಡಿರುವ ಪೊಲೀಸರು ಆದಷ್ಟು ಬೇಗ ಆರೋಪಿಯನ್ನು ಬಂಧಿಸುವುದಾಗಿ ಹೇಳಿದ್ದಾರೆ. ಧಮ್ಮಿಕಾ ನಿರೋಶನ ಶ್ರೀಲಂಕಾದ ಅಂಡರ್-19 ತಂಡ ಪ್ರತಿನಿಧಿಸಿದ್ದರು. ಆದರೆ ಸೀನಿಯರ್ ತಂಡದಲ್ಲಿ ಆಡುವ ಅವಕಾಶ ಅವರಿಗೆ ಎಂದಿಗೂ ಸಿಕ್ಕಿರಲಿಲ್ಲ. ಬಲಗೈ ವೇಗದ ಬೌಲರ್ ಆಗಿದ್ದ ಅವರು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿದ್ದರು.
ಶ್ರೀಲಂಕಾ ಅಂಡರ್ 19 ತಂಡದಲ್ಲಿ 2 ವರ್ಷಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು 10 ಪಂದ್ಯಗಳಲ್ಲಿ ನಾಯಕತ್ವವನ್ನೂ ವಹಿಸಿದ್ದರು. ಶ್ರೀಲಂಕಾದ ಅನೇಕ ದೊಡ್ಡ ಸ್ಟಾರ್ ಆಟಗಾರರಾದ ಏಂಜೆಲೊ ಮ್ಯಾಥ್ಯೂಸ್, ಉಪಲ್ ತರಂಗ ಅಂಡರ್ 19 ದಿನಗಳಲ್ಲಿ ಧಮ್ಮಿಕಾ ನಾಯಕತ್ವದಲ್ಲಿ ಆಡಿದ್ದಾರೆ.