ಕಾರವಾರ: ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಆಯಾ ಜಲಾನಯನ ಪ್ರದೇಶದಲ್ಲಿನ ನದಿಗಳು ಉಕ್ಕಿ ಹರಿಯುತ್ತಿವೆ. ಹಲವೆಡೆ ಮಳೆಯಿಂದಾಗಿ ಏನೇನಾಗತ್ತೋ ಎಂಬ ಆತಂಕ ಶುರುವಾಗಿದೆ. ಈ ಮಧ್ಯೆ ಉತ್ತರ ಕನ್ನಡದ ಜನರಿಗೆ ಆಘಾತವೊಂದು ಎದುರಾಗಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಬೃಹತ್ ಗುಡ್ಡ ಕುಸಿದು 7 ಜನರನ್ನು ಬಲಿ ಪಡೆದಿದೆ.
ಕುಸಿದ ಗುಡ್ಡ ಟೀ ಅಂಗಡಿ ಮತ್ತು ಮನೆಯನ್ನ ಮುಚ್ಚಿ ಹಾಕಿತ್ತು. ಗುಡ್ಡ ಕುಸಿದ ರಭಸಕ್ಕೆ ಮೂರು ಗ್ಯಾಸ್ ಟ್ಯಾಂಕರ್ ಪೈಕಿ ಎರಡು ಟ್ಯಾಂಕರ್‌ಗಳನ್ನ ಗುಡ್ಡದ ಮಣ್ಣು ತಳ್ಳಿಕೊಂಡು ಹೋಗಿದೆ. ಜೊತೆಗೆ ಮುಂದಿದ್ದ ಮತ್ತೆರಡು ಮನೆ ಮತ್ತು ಕಾರನ್ನು ಗಂಗಾವಳಿ ನದೆಗೆ ನೂಕಿದೆ.
ಹೀಗಾಗಿ ಎರಡು ಗ್ಯಾಸ್ ಟ್ಯಾಂಕರ್‌ಗಳು, ಮೂರು ಮನೆ, ಒಂದು ಕಾರು ನದಿ ಪಾಲಾಗಿದೆ. ಈ ವೇಳೆ ಕ್ಲೀನರ್ ಒಬ್ಬ ಸ್ವಲ್ಪದರಲ್ಲೇ ಪ್ರಾಣ ಉಳಿಸಿಕೊಂಡಿದ್ದಾನೆ. ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಲಾರಿಯಲ್ಲಿ ಆಗಮಿಸಿದ್ದಾರೆ. ರಸ್ತೆಯಲ್ಲಿ ನೀರು ನಿಂತಿರುವ ಹಿನ್ನೆಲೆಯಲ್ಲಿ ಕಾರುಗಳು ಓಡಾಡು ಪರಿಸ್ಥಿತಿ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕಾಂದೂ ಹಾಗೂ ಎಸ್ಪಿ ಎಂ.ನಾರಾಯಣ್ ಲಾರಿ ಮೂಲಕ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.