2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶತೃ ರಾಷ್ಟ್ರ ಪಾಕ್ ನಲ್ಲಿ ನಡೆಯುತ್ತಿದ್ದು, ಭಾರತ ಭಾಗವಹಿಸಲು ಹಿಂದೇಟು ಹಾಕುತ್ತಿದೆ.
ಈಗಾಗಲೇ ಭಾರತ ಐಸಿಸಿಗೆ ಭಾಗವಹಿಸುವ ತನ್ನ ನಿರ್ಧಾರದ ಕುರಿತು ಹೇಳಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜಿಸಿದರೆ ಮಾತ್ರ ಭಾರತ ಭಾಗವಹಿಸಲಿದೆ ಎಂದು ಐಸಿಸಿಗೆ ಹೇಳಿದೆ. ಹೈಬ್ರಿಡ್ ಮಾದರಿ ಎಂದರೆ, ಟೂರ್ನಿಯು ಪಾಕಿಸ್ತಾನದಲ್ಲೇ ನಡೆದರೂ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವುದು. ಭಾರತದ ಪಂದ್ಯಗಳನ್ನು ಯುಎಇ ಅಥವಾ ಶ್ರೀಲಂಕಾದಲ್ಲಿ ಆಯೋಜಿಸುವಂತೆ ಐಸಿಸಿಗೆ ಮನವಿ ಮಾಡಿದೆ.
ಆದರೆ, ಇದಕ್ಕೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಒಂದು ವೇಳೆ ಬಿಸಿಸಿಐ ಮನವಿಗೆ ಐಸಿಸಿ ಒಪ್ಪಿಗೆ ಸೂಚಿಸದಿದ್ದರೆ, ಭಾರತ ತಂಡ ಟೂರ್ನಿಯಿಂದ ಹಿಂದೆ ಸರಿಯಲಿದೆ. ಆಗ ಬೇರೊಂದು ತಂಡವು ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಏಕದಿನ ವಿಶ್ವಕಪ್ 2023 ರ ಅಂಕ ಪಟ್ಟಿಯಲ್ಲಿ ಟಾಪ್-8 ನಲ್ಲಿ ಕಾಣಿಸಿಕೊಂಡ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದಿವೆ. ಈ 8 ತಂಡಗಳಲ್ಲಿ ಶ್ರೀಲಂಕಾ ಇಲ್ಲ. ಹೀಗಾಗಿ ಭಾರತ ಹಿಂದೆ ಸರಿದರೆ, ಶ್ರೀಲಂಕಾ ತಂಡಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.
ಏಕದಿನ ವಿಶ್ವಕಪ್ 2023ರ ಅಂಕ ಪಟ್ಟಿಯಲ್ಲಿ ಶ್ರೀಲಂಕಾ ತಂಡವು 9ನೇ ಸ್ಥಾನದಲ್ಲಿದೆ. ಹೀಗಾಗಿ ಒಂದು ತಂಡ ಟೂರ್ನಿಯನ್ನು ಬಹಿಷ್ಕರಿಸಿದರೆ, ಅಂಕ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ತಂಡಕ್ಕೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ಭಾರತ ತಂಡ ಹಿಂದೆ ಸರಿದರೆ, ಶ್ರೀಲಂಕಾಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೂ ಐಸಿಸಿ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.