ರಾಮೇಶ್ವರಂ ಕೆಫೆಯಲ್ಲಿ ಬಾಂಬ್ (Rameshwaram Cafe Blast) ಇಟ್ಟವರು ತಮಿಳುನಾಡಿನಲ್ಲಿ ತರಬೇತಿ ಪಡೆದಿದ್ದರು ಎಂಬ ಹೇಳಿಕೆ ನೀಡಿದ್ದಕ್ಕೆ ತಮಿಳುನಾಡಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಾಗಿದೆ.
ಮದ್ರಾಸ್ ಹೈಕೋರ್ಟ್ (Madras High Court) ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಅವರಿಗೆ ಈ ಕುರಿತು ಪ್ರಶ್ನಿಸಿದೆ. ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿದ್ದ ಸಚಿವೆ ಶೋಭಾ ಕರಂದ್ಲಾಜೆ, ತಮಿಳುನಾಡಿನಲ್ಲಿ ತರಬೇತಿ ಪಡೆಯುತ್ತಾರೆ. ಆದರೆ, ಇಲ್ಲಿ (ಕರ್ನಾಟಕ)ಕ್ಕೆ ಬಂದು ಬಾಂಬ್ ಇಡುತ್ತಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಯು ತಮಿಳುನಾಡಿನವರನ್ನು ಅವಮಾನಿಸುವಂತಹದ್ದು ಎಂಬ ಆಕ್ಷೇಪ ವ್ಯಕ್ತವಾಗಿತ್ತು. ಈ ಕುರಿತು ಸಿ.ತ್ಯಾಗರಾಜನ್ ಎಂಬುವರು ಮಾರ್ಚ್ 20 ರಂದು ಮಧುರೈನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಶೋಭಾ ಕರಂದ್ಲಾಜೆ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಆದರೆ, ಎಫ್‌ಐಆರ್ ರದ್ದುಗೊಳಿಸುವಂತೆ ಶೋಭಾ ಕರಂದ್ಲಾಜೆ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಜಿ.ಜಯಚಂದ್ರನ್ ಈ ಪ್ರಶ್ನೆ ಕೇಳಿದ್ದಾರೆ.
ಬಾಂಬರ್‌ಗಳಿಗೆ ತಮಿಳುನಾಡಿನಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ತಮಿಳರ ವಿರುದ್ಧ ಎತ್ತಿಕಟ್ಟಿದ್ದಾರೆ ಎಂಬ ಆರೋಪವನ್ನು ಶೋಭಾ ಕರಂದ್ಲಾಜೆ ತಳ್ಳಿಹಾಕಿದ್ದಾರೆ. ಭದ್ರತೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸುವುದು ನನ್ನ ಉದ್ದೇಶವಾಗಿತ್ತು ಹೊರತು ಬೇರೆ ಯಾವ ಉದ್ದೇಶವಿರಲಿಲ್ಲ ಎಂದು ನ್ಯಾಯ ಪೀಠದ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ನನ್ನ ಹೇಳಿಕೆಯನ್ನು ಹಿಂಪಡೆದಿದ್ದೇನೆ. ಮಾರ್ಚ್ 19 ರಂದು ನನ್ನ ಎಕ್ಸ್ ಖಾತೆ ಮೂಲಕ ಟ್ವೀಟ್ ಮಾಡಿ ಮೂಲಕ ತಮಿಳುನಾಡಿನ ಜನರಲ್ಲಿ ಕ್ಷಮೆಯಾಚಿಸಿದ್ದೇನೆ. ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದೇನೆ. ಸ್ಪಷ್ಟೀಕರಣದ ಹೊರತಾಗಿಯೂ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಕಾನೂನು ಬಾಹಿರ ಎಂದು ಹೇಳಿದ್ದಾರೆ.
ಸಚಿವರು ಎರಡು ಗುಂಪಿನ ಜನರ ನಡುವೆ ದ್ವೇಷವನ್ನು ಉತ್ತೇಜಿಸುವ ಉದ್ದೇಶದಿಂದ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮತ್ತು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆ ವಿಡಿಯೋವನ್ನು ನ್ಯಾಯಾಲಯದಲ್ಲಿ ಪ್ಲೇ ಮಾಡಬೇಕೆಂದು ಸರ್ಕಾರಿ ವಕೀಲ ಕೆಎಂಡಿ ಮುಹಿಲನ್ ಅವರು ಹೇಳಿದ್ದರು. ಕೋರ್ಟ್ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದಾರೆ.