ವಾರಣಾಸಿ: ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅಪ್ರಾಪ್ತ ಬಾಲಕನೊಬ್ಬ ತಂದೆ-ತಾಯಿ ಹಾಗೂ ಸಹೋದರನನ್ನು ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 15 ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ. ಜುಲೈ 7 ಮತ್ತು 8 ರ ಮಧ್ಯರಾತ್ರಿ ಘಾಜಿಪುರ ಜಿಲ್ಲೆಯ ನಂದಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಸುಮ್ಹಿಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತಂದೆ ಮುನ್ಷಿ ಬಿಂದ್ (45), ತಾಯಿ ದೇವಂತಿ ಬಿಂದ್(40) ಮತ್ತು ಸಹೋದರನ ಕತ್ತು ಸೀಳಿದ್ದಾನೆ. ಕಳೆದ ಕೆಲವು ದಿನಗಳಿಂದ ಮೂವರನ್ನು ಕೊಲ್ಲಲು ನಿರ್ಧರಿಸಿದ್ದೆ. ಆದರೆ ಸಾಧ್ಯವಾಗಲಿಲ್ಲ ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಭಾನುವಾರ ರಾತ್ರಿ ಕುಟುಂಬದ ಸದಸ್ಯರೆಲ್ಲ ಮಲಗಿದ್ದಾಗ ಮದ್ಯ ಸೇವಿಸಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಂದ ಬಾಲಕ ತಂದೆ, ತಾಯಿ ಹಾಗೂ ಸಹೋದರನ ಕತ್ತು ಸೀಳಿದ್ದಾನೆ.
ಅಪರಾಧ ಮಾಡಿದ ನಂತರ, ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೊಲದಲ್ಲಿ ಚಾಕುವನ್ನು ಬಚ್ಚಿಟ್ಟು ಹತ್ತಿರದ ಆರ್ಕೆಸ್ಟ್ರಾ ಪ್ರದರ್ಶನ ನೋಡಲು ಹೋಗಿದ್ದಾನೆ. ನಂತರ ಬೆಳಗ್ಗೆ ಬಂದು ಮನೆಯವರನ್ನು ಯಾರೋ ಕೊಂದು ಹೋಗಿರುವುದಾಗಿ ಗ್ರಾಮಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ. ನಂತರ ಪೊಲೀಸರು ವಿಚಾರಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.