ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.
ಇಂಡಿಯಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದಿದ್ದ ಭಾರತ ತಂಡದ ನಾಯಕ ಯುವರಾಜ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಹೀಗಾಗಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಚಾಂಪಿಯನ್ಸ್ ಪರ ಇಯಾನ್ ಬೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 44 ಎಸೆತಗಳಲ್ಲಿ 59 ರನ್ ಗಳಿಸಿದರು.
ಅಂತಿಮ ಓವರ್ ಗಳಲ್ಲಿ ಸಮಿತ್ ಪಟೇಲ್ ಅಬ್ಬರಿಸಿ ಕೇವಲ 25 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಬೌಂಡರಿಗಳೊಂದಿಗೆ 51 ರನ್ ಗಳಿಸಿದರು. ಪರಿಣಾಮವಾಗಿ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತ್ತು.
ಈ ಗುರಿ ಬೆನ್ನಟ್ಟಿದ ಭಾರತ ಚಾಂಪಿಯನ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ಸ್ಪೋಟಕ ಆರಂಭ ನೀಡಿದರು. ಮೊದಲ ಓವರ್ ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ ಬೌಂಡರಿಗಳ ಸುರಿಮಳೆಗೈದರು. 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ 50 ರನ್ ಗಳಿಸಿದರು. ನಮನ್ ಓಜಾ 25 ರನ್ ಬಾರಿಸಿದರೆ, ಗುರುಕೀರತ್ ಸಿಂಗ್ ಮಾನ್ 33 ರನ್ ಸಿಡಿಸಿದರು. ಇರ್ಫಾನ್ ಪಠಾಣ್ 22 ರನ್ ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ಲೆಜೆಂಡ್ ತಂಡ 19 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ 3 ವಿಕೆಟ್ ಗಳ ಜಯ ಸಾಧಿಸಿತು.