ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಭಾನುವಾರ ರಾತ್ರಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ನಡೆಯಲಿದೆ. ಎರಡೂ ತಂಡಗಳು ಇಲ್ಲಿಯವರೆಗೆ ಅಜೇಯವಾಗಿದ್ದು, ವಿಶ್ವಕಪ್ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಆದರೆ, ಇಲ್ಲಿಯವರೆಗೆ ನಡೆದ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯಗಳಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾಗಿದ್ದು, ಈಗಲೂ ಅದೇ ಚರ್ಚೆ ಶುರುವಾಗಿದೆ. ಇದು 9ನೇ ಆವೃತ್ತಿಯ ಟೂರ್ನಿ. ಇಲ್ಲಿಯವರೆಗೆ ಟಿ20 ವಿಶ್ವಕಪ್‌ನ 8 ಫೈನಲ್ ಪಂದ್ಯಗಳು ನಡೆದಿವೆ. ಇದರಲ್ಲಿ ಒಮ್ಮೆ ಮಾತ್ರ ಟಾಸ್ ಸೋತ ತಂಡ ವಿಜಯಿಯಾಗಿದೆ. ಉಳಿದಂತೆ 7 ಬಾರಿ ಟಾಸ್ ಗೆದ್ದ ತಂಡ ಗೆದ್ದಿದೆ. ಕಳೆದ 8 ವಿಶ್ವಕಪ್ ಫೈನಲ್‌ಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡವು 6 ಬಾರಿ ಚಾಂಪಿಯನ್ ಆಗಿದ್ದರೆ, ಮೊದಲು ಬ್ಯಾಟ್ ಮಾಡಿದ ತಂಡ ಎರಡು ಬಾರಿ ಗೆದ್ದಿವೆ.
ವಿಶ್ವಕಪ್‌ನ ಮೊದಲ ಆವೃತ್ತಿ 2007ರಲ್ಲಿ ನಡೆಯಿತು. ಆಗ ಫೈನಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿತ್ತು. ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಭಾರತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಪಾಕ್ 19.3 ಓವರ್ ಗಳಲ್ಲಿ 152 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. 2009ರಲ್ಲಿ ಎರಡನೇ ಆವೃತ್ತಿಯ ಅಂತಿಮ ಪಂದ್ಯ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆಯಿತು. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿತು. ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಪಾಕ್ ತಂಡ 18.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿ ಗೆಲುವಿನ ನಗೆ ಬೀರಿತು.
2010ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಆದರೆ, ಗುರಿ ಬೆನ್ನಟ್ಟಿದ ಇಂಗ್ಲೆಂಡ್ 17 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಗೆಲುವಿನ ನಗೆ ಬೀರಿತು.
2012ರಲ್ಲಿ ಫೈನಲ್ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳ ಮಧ್ಯೆ ನಡೆಯಿತು. ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ 18.4 ಓವರ್ಗಳಲ್ಲಿ 101 ರನ್ ಗಳಿಗೆ ಆಲೌಟ್ ಆಯಿತು. 2014ರಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ ಪೈನಲ್ ತಲುಪಿದ್ದವು. ಶ್ರೀಲಂಕಾ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತು. ಶ್ರೀಲಂಕಾ 17.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತು.
2016ರ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ವೆಸ್ಟ್ ಇಂಡೀಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಇಂಗ್ಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತ್ತು. ಉತ್ತರವಾಗಿ ವೆಸ್ಟ್ ಇಂಡೀಸ್ 19.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತ್ತು. 2021ಲ್ಲಿ ಫೈನಲ್ ಪಂದ್ಯವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಿತು. ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತ್ತು. ಆಸ್ಟ್ರೇಲಿಯಾ 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿ ಗೆಲುವು ಸಾಧಿಸಿತು.
2022ರ ಫೈನಲ್ ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕಾದಾಡಿದವು. ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು. ಇಂಗ್ಲೆಂಡ್ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತು. ಹೀಗಾಗಿ ಟಾಸ್ ಇಲ್ಲಿ ಪ್ರಾಮುಖ್ಯತೆ ಪಡೆದಿದ್ದು, ಇಂದಿನ ಪಂದ್ಯದಲ್ಲಿ ಯಾರು ಟಾಸ್ ಗೆಲ್ಲುತ್ತಾರೆ ಕಾಯ್ದು ನೋಡಬೇಕಿದೆ.