ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತ ತಂಡ (India vs Australia) ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಸೇಡು ತೀರಿಸಿಕೊಂಡಿದೆ.
ಈ ಗೆಲುವಿನ ಮೂಲಕ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಆಸ್ಟ್ರೇಲಿಯಾವನ್ನು ಬಗ್ಗು ಬಡಿದ ಭಾರತ ತಂಡ ಏಕದಿನ ವಿಶ್ವಕಪ್ ನ ಫೈನಲ್ (ODI World Cup 2023) ಸೋಲಿಗೆ ಸೇಡು ತೀರಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ (Team India) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಸೋಲು ಕಂಡಿತು. ಈ ಮೂಲಕ ಸೆಮಿಫೈನಲ್ ಗೆ ಎಂಟ್ರಿ ಪಡೆದಿರುವ ಭಾರತ ತಂಡ ಅಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಭಾರತಕ್ಕೂ ಮತ್ತೆ ಆರಂಭಿಕ ಆಘಾತ ಕಾಡಿತು. ತಂಡ 6 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರು. ನಾಯಕ ರೋಹಿತ್ ಅಬ್ಬರದ ಬ್ಯಾಟಿಂಗ್ ಆರಂಭಿಸಿ ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕ ಗಳಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನ ರೋಹಿತ್ ವೃತ್ತಿಜೀವನದಲ್ಲಿ ಅತ್ಯಂತ ವೇಗದ ಅರ್ಧಶತಕ ಎನಿಸಿಕೊಂಡಿತು. ಪಂತ್ ಕೂಡ ಉತ್ತಮ ಬ್ಯಾಟ್ ಬೀಸುವಾಗಲೇ ಫೆವಲಿಯನ್ ಸೇರಿದರು. ರೋಹಿತ್ ಮತ್ತು ಪಂತ್ ನಡುವೆ ಎರಡನೇ ವಿಕೆಟ್‌ಗೆ 87 ರನ್ ಗಳ ಜೊತೆಯಾಟ ನೀಡಿದರು.
ಸೂರ್ಯಕುಮಾರ್ ಯಾದವ್, ರೋಹಿತ್ ಜೊತೆಗೂಡಿ ವೇಗವಾಗಿ ರನ್ ಕಲೆಹಾಕಿದರು. ಈ ವೇಳೆ ರೋಹಿತ್‌ಗೆ ವಿಶ್ವಕಪ್ ನಲ್ಲಿ ವೇಗದ ಶತಕ ಬಾರಿಸುವ ಅವಕಾಶವಿತ್ತು. ಆದರೆ ರೋಹಿತ್ ನರ್ವಸ್ ನೈಂಟಿಗೆ ಬಲಿಯಾದರು. ರೋಹಿತ್ 41 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 92 ರನ್ ಗಳಿಸಿ ಔಟ್ ಆದರು. ನಂತರ ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಸಣ್ಣ ಆದರೆ ಪ್ರಮುಖ ನಾಕ್‌ಗಳನ್ನು ಆಡಿದರು. ಇದರಿಂದಾಗಿ ಟೀಂ ಇಂಡಿಯಾ 200ರ ಗಡಿ ತಲುಪಲು ಸಾಧ್ಯವಾಯಿತು.
ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಡೇವಿಡ್ ವಾರ್ನರ್ 6 ರನ್ ಗಳಿಸಿ ಔಟಾದರು. ಆದರೆ, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಎರಡನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು. ಹೀಗಾಗಿ ಆಸ್ಟ್ರೇಲಿಯಾಕ್ಕೆ ಗೆಲುವಿನ ಭರವಸೆ ಮೂಡಿತ್ತು. ಆದರೆ ಭಾರತೀಯ ಬೌಲರ್ ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಭಾರತದ ಪರ ವೇಗಿ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದರು.