ಭಾರತ ಮಹಿಳಾ ತಂಡ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹ್ಯಾಟ್ರಿಕ್ ಶತಕ ಬಾರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಸ್ಮೃತಿ ಮಂಧಾನ ಉತ್ತಮವಾಗಿ ಬ್ಯಾಟ್ ಬೀಸಿದರು. ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಂಧಾನ, ಕೇವಲ 10 ರನ್ ಗಳಿಂದ ಹ್ಯಾಟ್ರಿಕ್ ಶತಕ ಬಾರಿಸುವ ಅವಕಾಶ ಕಳೆದುಕೊಂಡರು. 83 ಎಸೆತಗಳನ್ನು ಎದುರಿಸಿದ ಮಂಧಾನ 11 ಬೌಂಡರಿಗಳ ನೆರವಿನಿಂದ 90 ರನ್ ಗಳನ್ನು ಗಳಿಸಿ ಔಟ್ ಆದರು. ಮೊದಲೆರಡೂ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಶತಕ ಸಿಡಿಸಿ ಮಿಂಚಿದ್ದರು. ಬೆಂಗಳೂರಿನಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ 127 ಎಸೆತಗಳನ್ನು ಎದುರಿಸಿದ್ದ ಸ್ಮೃತಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 117 ರನ್ ಗಳಿಸಿದ್ದರು.

ಎರಡನೇ ಏಕದಿನ ಪಂದ್ಯದಲ್ಲಿ ಸ್ಮೃತಿ ಬ್ಯಾಟ್ ನಿಂದ ಶತಕ ಸಿಡಿದಿತ್ತು. ಈ ಪಂದ್ಯದಲ್ಲಿ 126 ಎಸೆತಗಳನ್ನು ಎದುರಿಸಿದ್ದ ಮಂಧಾನ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 136 ರನ್ ಗಳಿಸಿದ್ದರು. ಸತತ ಎರಡು ಪಂದ್ಯಗಳಲ್ಲಿ 2 ಶತಕ ಸಿಡಿಸುವುದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಬ್ಯಾಟರ್ ಎನಿಸಿಕೊಂಡಿದ್ದರು. ಅಲ್ಲದೇ, ಭಾರತೀಯ ಆಟಗಾರರ ಪೈಕಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 215 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಭಾರತೀಯರು ಉತ್ತಮ ಆಟ ಪ್ರದರ್ಶಿಸಿದ್ದಾರೆ.
