ಕೊಲಂಬೊ: ತಮಿಳುನಾಡಿನ (Tamil Nadu) ನೆಡುಂತೀವು ಹತ್ತಿರದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ 22 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿರುವ ಕುರಿತು ವರದಿಯಾಗಿದೆ.
3 ಮೀನುಗಾರರ ದೋಣಿಗಳನ್ನು ಕೂಡ ಶ್ರೀಲಂಕಾದ ನೌಕಾಪಡೆ (Sri Lankan Navy) ವಶಪಡಿಸಿಕೊಂಡಿದೆ. ಮೀನುಗಾರರನ್ನು ನಿರಂತರವಾಗಿ ಶ್ರೀಲಂಕಾ ಬಂಧಿಸುತ್ತಿರುವ ವಿಚಾರವಾಗಿ, ಜೂ.19 ರಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರಿಗೆ ಪತ್ರ ಬರೆದಿದ್ದರು. ಇಂತಹ ಘಟನೆಗಳು ಮೀನುಗಾರರ ಜೀವನೋಪಾಯಕ್ಕೆ ಅಡ್ಡಿಪಡಿಸುತ್ತವೆ. ಅಲ್ಲದೇ ಇಡೀ ಮೀನುಗಾರ ಸಮುದಾಯದಲ್ಲಿ ಭಯ ಹುಟ್ಟು ಹಾಕುತ್ತದೆ. ಬಂಧನಕ್ಕೊಳಗಾಗಿರುವ ಎಲ್ಲಾ ಮೀನುಗಾರರು ಮತ್ತು ಅವರ ದೋಣಿಗಳನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆದರೆ, ಈ ಪತ್ರ ಬರೆದ ಬೆನ್ನಲ್ಲಿಯೇ ಮತ್ತೆ ಮೀನುಗಾರರ ಬಂಧನವಾಗಿದೆ.

ಅಲ್ಲದೇ, ಬಂಧಿತ ಮೀನುಗಾರರ ಬಿಡುಗಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ. ದೈನಂದಿನ ಜೀವನ ಮತ್ತು ಜೀವನೋಪಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
