ತಮಿಳುನಾಡು: ಬಸ್ ನಿಂದ ವೃದ್ಧರೊಬ್ಬರನ್ನು ಚಾಲಕ ಹಾಗೂ ನಿರ್ವಾಹಕ ಎಳೆದೊಗೆದ ಅಮಾನವೀಯ ಘಟನೆಯೊಂದು ನಡೆದಿದೆ.
ತಿರುಪುರದಿಂದ ಕೊಪಿಸೆಟಿಪಾಳ್ಯಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ವೃದ್ಧರೊಬ್ಬರು ಮಹಿಳೆಯರಿದ್ದ ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದರು. ಇದಕ್ಕೆ ಚಾಲಕ ಹಾಗೂ ನಿರ್ವಾಹಕ ಆಕ್ಷೇಪ ವ್ಯಕ್ತಪಡಿಸಿದ್ದರು.ಆಗ ವೃದ್ಧ ವ್ಯಕ್ತಿಗೆ ಕಬ್ಬಿಣದ ರಾಡ್ ನಿಂದ ಬೆದರಿಸಿ, ವೃದ್ಧನನ್ನು ಹೊರಗೆ ತಳ್ಳಿ, ಆತನ ಬ್ಯಾಗ್ ಎಸೆದಿದ್ದಾರೆ. ಇದರಿಂದಾಗಿ ವೃದ್ಧ ವ್ಯಕ್ತಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.
ಬಸ್ ನಿಲ್ದಾಣದಲ್ಲಿದ್ದ ವ್ಯಕ್ತಿಯೊಬ್ಬರು ಚಾಲಕ ಹಾಗೂ ನಿರ್ವಾಹಕನ ಕೃತ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ವೃದ್ಧನ ವಿರುದ್ಧ ಕೆಟ್ಟದಾಗಿ ನಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಕೇಳಿ ಬಂದಿದ್ದವು.
ಕುಡುಕ ವೃದ್ಧನಿಂದ ಮಹಿಳಾ ಪ್ರಯಾಣಿಕರನ್ನು ರಕ್ಷಿಸಲು ಕಂಡಕ್ಟರ್ ಮತ್ತು ಚಾಲಕ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ವಯಸ್ಸಾದ ವ್ಯಕ್ತಿಯನ್ನು ಕೆಳಗೆ ತಳ್ಳುವುದು ಅಪರಾಧ. ಹೀಗಾಗಿ ಕಂಡಕ್ಟರ್ ಮುರುಗನ್ ಮತ್ತು ಚಾಲಕ ತಂಗರಾಜ್ ಅವರನ್ನು ತಾತ್ಕಾಲಿಕವಾಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ.