ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಶೇ. 78ರಷ್ಟು ಹೆಚ್ಚು ಮಳೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 5 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾದರೆ, 4 ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ.
ಬರ ಪರಿಹಾರವನ್ನು ಸುಪ್ರೀಂ ಕೋರ್ಟ್ಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ಮೊದಲ ವಾರದಲ್ಲಿ 27.5 ಲಕ್ಷ ರೈತರಿಗೆ ಬರ ಪರಿಹಾರ ನೀಡಿದ್ದೇವೆ. ನೀರು ಬರದೆ ಬೆಳೆಹಾನಿ ಆದ ರೈತರಿಗೆ ಪರಿಹಾರ ಕೊಡಲು ತೀರ್ಮಾನಿಸಲಾಗಿದ್ದು, ಒಂದು ವಾರದೊಳಗೆ ಪರಿಹಾರ ನೀಡುವಂತೆ ಸೂಚಿಸಲಾಗಿದೆ. 17 ಲಕ್ಷದ 9 ಸಾವಿರ ರೈತ ಕುಟುಂಬಕ್ಕೆ ಜೀವನೋಪಾಯ ಪರಿಹಾರ ನೀಡಲಿದ್ದೇವೆ ಎಂದು ಹೇಳಿದ್ದಾರೆ.
2800 ರೂ. ಅಥವಾ 3000 ರೂ. ಬರಬಹುದು. ಇದು ಜೀವನೋಪಾಯ ನಷ್ಟದ ಪರಿಹಾರ. ಇದು ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ ಎಂದು ಹೇಳಿದ್ದಾರೆ.
