ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಗೆ ಮತದಾರ ಬಿಸಿ ಮುಟ್ಟಿಸಿದ್ದು, ಮೈತ್ರಿ ಪಕ್ಷಗಳ ಬೆಂಬಲ ಅವಶ್ಯವಾಗಿದೆ. ಈ ಮಧ್ಯೆ ಇಂಡಿಯಾ ಮೈತ್ರಿ ಎನ್ ಡಿಎ ಮೈತ್ರಿಕೂಟದ ಪಕ್ಷಗಳಿಗೆ ಆಫರ್ ನೀಡುತ್ತಿದೆ.
400ರ ಗಡಿ ದಾಟುವ ಕನಸು ಹೊತ್ತು ಚುನಾವಣಾ ಅಖಾಡಕ್ಕೆ ಧುಮುಕಿದ್ದ ಬಿಜೆಪಿ ಈ ಬಾರಿ ನಿರೀಕ್ಷೆಗಿಂತಲೂ ಕಡಿಮೆ ಗೆದ್ದಿದೆ. ಹೀಗಾಗಿ ಬಿಜೆಪಿಗೆ ಮಿತ್ರ ಪಕ್ಷಗಳ ವಿಶ್ವಾಸ ಅನಿವಾರ್ಯವಾಗಿದೆ. ಇನ್ನೊಂದೆಡೆ ಅವಕಾಶ ಸಿಕ್ಕರೆ ಬಿಡೋದು ಬೇಡ ಎಂದು ಇಂಡಿಯಾ ಒಕ್ಕೂಟ ಕೂಡ ಅಧಿಕಾರ ರಚಿಸಲು ಮುಂದಾಗಿದೆ.
ಹೀಗಾಗಿಯೇ ಬಿಜೆಪಿಯ ಮಿತ್ರ ಪಕ್ಷಗಳನ್ನು ಸೆಳೆಯಲು ಇಂಡಿಯಾ ಮೈತ್ರಿಯ ನಾಯಕರು ಆರಂಭಿಸಿದ್ದಾರೆ. ಎನ್ ಡಿಎ ಮೈತ್ರಿಯ ಕಿಂಗ್ ಮೇಕರ್ ಗಳನ್ನು ಆಕರ್ಷಿಸಲು ದೊಡ್ಡ ದೊಡ್ಡ ಆಫರ್ ನೀಡಲಾಗುತ್ತಿದೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಟಾರ್ಗೆಟ್ ಮಾಡಲಾಗಿದೆ.
ಈ ನಾಯಕರೇ ಈಗ ಬಿಜೆಪಿಗೆ ಆಧಾರ. ಹೀಗಾಗಿಯೇ ಇವರಿಗಾಗಿ ಇಂಡಿಯಾ ಮೈತ್ರಿ ಗಾಳ ಹಾಕಿದೆ. ಇವರಿಬ್ಬರು ಕೂಡ ಮೋದಿ ಅವರಿಂದ ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದ್ದರು. ಚುನಾವಣೆಗೆ ಕೆಲವೇ ದಿನಗಳ ಮುನ್ನ ಈ ನಾಯಕರು ಬಿಜೆಪಿ ಜೊತೆ ಕೈ ಜೋಡಿಸಿದ್ದರು. ಹೀಗಾಗಿ ಇಬ್ಬರನ್ನೂ ಸೆಳೆಯುವುದು ಸುಲಭ ಎಂಬ ಕಾರಣಕ್ಕೆ ಇಂಡಿಯಾ ಮೈತ್ರಿಕೂಟ ಪ್ರಯತ್ನ ನಡೆಸುತ್ತಿದೆ.
ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಉಪ ಪ್ರಧಾನ ಮಂತ್ರಿಯ ಆಫರ್ ಅನ್ನು ಇಂಡಿಯಾ ನಾಯಕರು ನೀಡಿದ್ದಾರೆ. ಇದರ ಜೊತೆ ಆಂಧ್ರದ ಮುಂದಿನ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಮ್ಮ ಕಡೆ ಸೆಳೆಯಲು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಶರದ್ ಪವಾರ್ ಅವರನ್ನು ಮುಂದಿಟ್ಟುಕೊಂಡು ಈ ಪ್ರಯತ್ನ ನಡೆಸಲಾಗುತ್ತಿದೆ. ಇಂಡಿಯಾ ಮೈತ್ರಿಕೂಟ ಪ್ರಾರಂಭವಾದಾಗ ನಿತೀಶ್ ಕುಮಾರ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ ತಟಸ್ಥ ಸಂಸದರನ್ನು ಸೆಳೆಯಲು ಇಂಡಿಯಾ ಮೈತ್ರಿ ಮುಂದಾಗಿದೆ. ಆದರೆ, ಎನ್ ಡಿಎ ಮೈತ್ರಿಕೂಟ ಛಿದ್ರವಾಗಿ ಮೋದಿ ಹ್ಯಾಟ್ರಿಕ್ ಪ್ರಧಾನಿಯಾಗುವ ಕನಸು ಕನಸಾಗಿಯೇ ಉಳಿಯಲಿದೆಯೇ? ಅಥವಾ ಎನ್ ಡಿಎ ಒಗ್ಗಟ್ಟಾಗಿ ಇರಲಿದೆಯೇ? ಕಾಯ್ದು ನೋಡಬೇಕಿದೆ.