
ಡೇಂಜರಸ್ ‘ಅಮೀಬ’ವು ಐದು ವರ್ಷದ ಹೆಣ್ಣು ಮಗುವೊಂದನ್ನು ಬಲಿ ಪಡೆದ ವರದಿಯಾಗಿದೆ. ಪಕ್ಕದ ರಾಜ್ಯ ಕೇರಳದ ಕೊಲ್ಲಪುರಂ ಎಂಬಲ್ಲಿ ಈ ಘಟನೆ ನಡೆದಿದ್ದು, ಬಾಳಿ ಬದುಕಬೇಕಾದ ಬಾಲಕಿ ಹಾಳು ಅಮೀಬದಿಂದಾಗಿ ಹಠಾತ್ ಸಾವನ್ನಪ್ಪಿದ್ದಾಳೆ. ಮನೆ ಹತ್ತಿರದ ನದಿಯಲ್ಲಿ ಸ್ನಾನ ಮಾಡಿದ್ದರಿಂದ, ಈ ಕಾಯಿಲೆಗೆ ತುತ್ತಾಗಿ ಸಾವನಪ್ಪಿದ್ದಾಳೆ ಎಂದು ಅಂದಾಜಿಸಲಾಗಿದೆ. ಆಕೆಗೆ ‘ನೆಗ್ಲೇರಿಯಾ ಫೌಲೇರಿ’ ಎಂಬ ಭಯಾನಕ ಖಾಯಿಲೆ ಬಂದಿತ್ತು. ಅಂದರೆ ನೀರಿನ ಮೂಲಕ ‘ಅಮೀಬ’ ಮೆದುಳು ಹೊಕ್ಕು ಕೊಂದು ಮುಗಿಸುವ ಭಯಾನಕ ರೋಗವದು.
ಇದನ್ನು “ಮೆದಳು ತಿನ್ನುವ ಅಮೀಬ” ಎಂದು ಕರೆಯುವರು. ಹುಷಾರಾಗಿರಿ! ಇದು ನಮಗೆ ಗೊತ್ತೇ ಆಗದಂತೆ ನಮ್ಮ ಮೆದುಳು ತಿಂದು ಕೊಲ್ಲುವ ಡೇಂಜರಸ್ ಅಮೀಬದ ಕಥೆ!
ಮೂಗಿನ ಮೂಲಕ ಈ ಅಮೀಬವು ಮೆದುಳನ್ನ ತಲುಪಿ, ಮೆದುಳಿನ ಅಂಗಾಂಶ ನಾಶಪಡಿಸುವ ಮೂಲಕ ಸಾವು ಸಂಭವಿಸುತ್ತದೆ. ನದಿಗಳಲ್ಲಿ , ಕೆರೆಗಳಲ್ಲಿ, ಸ್ವಿಮ್ಮಿಂಗ್ ಪೂಲ್, ನಲ್ಲಿಗಳ ಮೂಲಕ ಮೂಗಿನಲ್ಲಿ ನೀರು ಹೋಗುವುದರಿಂದ ಅಮೀಬ ನಮ್ಮ ದೇಹ ಪ್ರವೇಶಿಸುತ್ತದೆ, ಮುಂದೆ ಮೆದುಳನ್ನ ತಲುಪುತ್ತದೆ. ನಿಧಾನವಾಗಿ ಮೆದುಳಿನ ಅಂಗಾಂಶ ತಿಂದು ಮುಗಿಸುತ್ತದೆ.
ಅಸಲಿಗೆ, ಈ ರೋಗದ ಸಾವಿನ ಪ್ರಮಾಣ ಶೇಕಡ 97 ಇರುವುದು ಭಯ ತರುವಂತ ವಿಷಯ!.

ಈ ಸೋಂಕಿಗೆ ಒಳಗಾದ 12 ದಿನದ ಒಳಗೆ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ನಂತರದ 2 ವಾರಗಳಲ್ಲಿ ಸಾವನಪ್ಪುವ ಸಾಧ್ಯತೆ ಇರುತ್ತದೆ. ಆರಂಭಿಕ ಹಂತದಲ್ಲಿ ತಲೆನೋವು, ವಾಂತಿ, ವಾಕರಿಕೆ, ಜ್ವರ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಈ ಮೆದುಳು ತಿನ್ನುವ ಈ ಡೇಂಜರಸ್ ಅಮೀಬದಿಂದ ರಕ್ಷಿಸಿಕೊಳ್ಳಲು ಸೂಕ್ತ ಮುಂಜಾಗೃತ ಕ್ರಮ ಅನುಸರಿಸುವುದು ಒಳ್ಳೆಯದು. ಯಾರೇ ಆಗಲಿ,
ಈಜಲು ಹೋಗುವಾಗ ಮೂಗಿನ ಕ್ಲಿಪ್ ಬಳಸುವುದು, ಕಲುಷಿತ ನೀರಿನಿಂದ ದೂರವಿರುವುದು ಹಾಗು ಸ್ನಾನ ಮಾಡುವಾಗ ಮೂಗಿನೊಳಗೆ ನೀರು ಹೋಗದಂತೆ ನೋಡಿಕೊಳ್ಳುವುದು ಈ ರೋಗ ತಡೆಯುವ ಮಾರ್ಗಗಳಾಗಿವೆ. ಎಚ್ಚರಿಕೆ ವಹಿಸಿರಿ..