ನವದೆಹಲಿ: ಅರವಿಂದ್ ಕೇಜ್ರಿವಾಲ್ ರನ್ನು ಭಯೋತ್ಪಾದಕನಂತೆ ನೋಡಲಾಗುತ್ತಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಆರೋಪಿಸಿದ್ದಾರೆ.
ದೆಹಲಿಯ ತಿಹಾರ್ ಜೈಲ್ ನಲ್ಲಿ ಸಿಎಂ ಕೇಜ್ರಿವಾಲ್ ರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಪ್ರಭಲ ಸ್ಪರ್ಧಿಯಾಗಿರುವ ಆಪ್ ನ್ನು ಇರದಂತೆ ನೋಡಿಕೊಳ್ಳಲು ಬಿಜೆಪಿ ಈ ರೀತಿಯ ಕುತಂತ್ರ ರಾಜಕಾರಣ ಮಾಡುತ್ತಿದೆ. ಕೇಜ್ರಿವಾಲ್ ಯಾವ ತಪ್ಪು ಮಾಡದಿದ್ದರೂ ಅವರನ್ನು ಉಗ್ರನಂತೆ ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಜೈಲಿನಲ್ಲಿ ಅವರನ್ನು ಕಂಡು ನನಗೆ ತುಂಬಾ ನೋವಾಯಿತು. ಜೈಲಿನಲ್ಲಿದ್ದರೂ ಅವರು ದೆಹಲಿಯ ಜನರ ಕುರಿತು ಕಾಳಜಿ ಬಿಟ್ಟಿಲ್ಲ. ಮುಂದಿನ ವಾರ ಸಚಿವರನ್ನು ಕರೆಯಿಸಿಕೊಂಡು ಆಡಳಿತದ ಕುರಿತು ಚರ್ಚೆ ನಡೆಸುತ್ತಾರೆ ಎಂದು ಹೇಳಿದರು.
ಅಲ್ಲದೇ, ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಮಾನ್, ಇಡಿ, ಕೇಜ್ರಿವಾಲ್ ಅವರ ಚಿಂತನೆಯನ್ನು ಬಂಧಿಸಲು ಸಾಧ್ಯವಿಲ್ಲ. ಎಎಪಿ ಮಾತ್ರ ಬಿಜೆಪಿಯನ್ನು ತಡೆಯಬಹುದು ಎಂದಿದ್ದಾರೆ. ದೆಹಲಿ ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ರನ್ನು ಇಡಿ ಕಳೆದ ತಿಂಗಳು ಬಂಧಿಸಿದೆ.


















