ಮಸ್ಕತ್: ಭೀಕರ ಮಳೆಯಿಂದ ಹಠಾತ್ ಆಗಿ ಸೃಷ್ಟಿಯಾದ ಪ್ರವಾಹಕ್ಕೆ 13 ಜನ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಒಮಾನ್ ನಲ್ಲಿ ನಡೆದಿದೆ. ನೋಡ ನೋಡುತ್ತಿದ್ದಂತೆಯೇ ವಾಹನಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಉತ್ತರ ಅಲ್ ಶರ್ಕಿಯಾ ಗವರ್ನರೇಟ್ ನಲ್ಲಿ ನಾಗರಿಕ ರಕ್ಷಣಾ ಮತ್ತು ಅಂಬುಲೆನ್ಸ್ ವಿಭಾಗದ ಶೋಧ ತಂಡಗಳ ಕಾರ್ಯಾಚರಣೆಯಿಂದಾಗಿ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಮಗು ಸೇರಿದಂತೆ ಮೂವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವ್ಯಾಪಕ ಮಳೆಯಿಂದಾಗಿ ಒಮಾನ್ ನಲ್ಲಿ ಹಲವು ಭಾಗಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಜನರು ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಒಮಾನ್‌ನ ಬೀದಿಗಳಲ್ಲಿ ಪ್ರವಾಹದ ನೀರು ಹರಿಯುತ್ತಿದ್ದಂತೆ ವಾಹನಗಳು ಜಲಾವೃತಗೊಂಡಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಲೆಗಳಿಂದ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಕೂಡ ನಡೆದಿದೆ. ಒಮಾನ್ ಅಷ್ಟೇ ಅಲ್ಲ, ಯುಎಇ ಕೆಲವು ಪ್ರದೇಶಗಳಲ್ಲಿ ಕೂಡ ಆಲಿಕಲ್ಲು, ಗುಡುಗು ಹಾಗೂ ಮಿಂಚು ಸಮೇತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ಕೂಡ ಹೇಳಿದೆ.


















