ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೇ, ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತ್ತು. ಸಿಎಸ್ ಕೆ 20 ರ ಗಡಿ ದಾಟುವುದು ಅನುಮಾನ ಎಂದೇ ಎಲ್ಲರೂ ಭಾವಹಿಸಿದ್ದರು. ಕೊನೆಯಲ್ಲಿ ಶಿವಂ ದುಬೆ ಹಾಗೂ ಮಾಜಿ ನಾಯಕ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ತಂಡ 200ರ ಗಡಿ ದಾಟಿತು. ಕೊನೆಯ ಓವರ್ ನಲ್ಲಿ ಅಂಗಳಕ್ಕೆ ಇಳಿದ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಇಡೀ ಮೈದಾನವೇ ಕುಣಿದು ಕುಪ್ಪಳಿಸುವಂತೆ ಮಾಡಿದರು.
ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ 20ನೇ ಓವರ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಓವರ್ ನ 2ನೇ ಎಸೆತದಲ್ಲಿ ಪಾಂಡ್ಯ, ಡೇರಿಲ್ ಮಿಚೆಲ್ ವಿಕೆಟ್ ಉರುಳಿಸಿ ಮುಂಬೈ ಮೇಲುಗೈ ಸಾಧಿಸುವಂತೆ ಮಾಡಿದರು. ಆದರೆ ಮುಂದಿನ 4 ಎಸೆತಗಳಲ್ಲಿ ಪಾಂಡ್ಯ, ಮಿಚೆಲ್ ವಿಕೆಟ್ ಯಾಕಾದರೂ ತೆಗೆದೆ ಎಂದು ಗೊಣಗುವಂತಾಯಿತು.
ಕೊನೆಯ 4 ಎಸೆತಗಳು ಬಾಕಿ ಇರುವಾಗ ಬ್ಯಾಟಿಂಗ್ಗೆ ಬಂದ ಧೋನಿ ಮೊದಲ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ 2 ರನ್ ಗಳಿಸಿದರು. ಹೀಗಾಗಿ ಧೋನಿ ಕೇವಲ 4 ಎಸೆತಗಳಲ್ಲಿ 20 ರನ್ ಗಳಿಸಿ, ತಂಡದ ಮೊತ್ತ ಹೆಚ್ಚಿಸಿದರು. ಇದನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದರು.
2008 ರಿಂದ ಚೆನ್ನೈ ಪರ ಆಡುತ್ತಿರುವ ಧೋನಿಗೆ ಈ ಪಂದ್ಯ 250ನೇ ಪಂದ್ಯವಾಗಿತ್ತು. ಈ ದಾಖಲೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಈ ತಂಡದ ಪರ 5 ಸಾವಿರ ರನ್ ಪೂರೈಸಿದ ಎರಡನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.