ಹೆಸರಿನಂತೆ ಅಲ್ಲಿ ಸುಂದರ ಬದುಕಿನ ಸಂದೇಶ ಖಾಲಿಯಾಗಿಯೇ ಇತ್ತು. ಬಡವರ ನಲುಗಾಟ, ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿತ್ತು. ಅಲ್ಲಿ ತೋಳ್ಬಲದ ಆಕ್ರಮಣಕ್ಕೆ ನಲುಗಿದವರು… ಆಸ್ತಿ ಕಳೆದುಕೊಂಡವರ ಆಕ್ರಂದನ ಮಾತ್ರ ಕೇಳುತ್ತಿತ್ತು. ಇದಕ್ಕೆಲ್ಲ ದಿಟ್ಟ ಉತ್ತರದ ಸಂದೇಶ ಕೊಟ್ಟವರೇ ರೇಖಾ ಪಾತ್ರಾ! ಅದೇ ಸಂದೇಶ್ ಖಾಲಿ!!
ಈ ದೌರ್ಜನ್ಯಗಳ ವಿರುದ್ಧ ಮೊದಲ ಬಾರಿಗೆ ದನಿ ಎತ್ತಿದ್ದೇ ಈಕೆ. ಹೌದು, ದುರುಳರ ವಿರುದ್ಧ ಧೈರ್ಯ ತೋರಿದ್ದೇ ಈ ರೇಖಾ ಪಾತ್ರ. ಇದೀಗ ಲೋಕಸಭೆ ಚುನಾವಣಾ ಕಣಕ್ಕೂ ಇಳಿಯುವ ಮೂಲಕ ಸಂದೇಶ್ ಖಾಲಿಯ ದಮನಿತ ಮಹಿಳೆಯರ ದನಿಯಾಗಿ ಹೊರಹೊಮ್ಮಿದ್ದಾರೆ. ಇಂಥ ಕೆಚ್ಚೆದೆಯ ರೇಖಾ ಪಾತ್ರ ಈಗ ಪಶ್ಚಿಮಬಂಗಾಳದ ಬಸಿರ್ ಹಾತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಬಿಜೆಪಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸ್ವತಃ ಈಕೆಗೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ. ಸಂದೇಶ್ ಖಾಲಿಯಲ್ಲಿ ನೀವು ಯುದ್ಧವನ್ನೇ ಸಾರಿದ್ದೀರಿ. ನೀವು ನಿಜಕ್ಕೂ ಶಕ್ತಿ ಸ್ವರೂಪಿಣಿ ಎಂದು ಬಣ್ಣಿಸಿದ್ದಾರೆ.
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರದ ಸಂತ್ರಸ್ತೆ ರೇಖಾ ಪಾತ್ರಾ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ರಣತಂತ್ರ ರೂಪಿಸಿದೆ.
ಸಂದೇಶ್ ಖಾಲಿಯಲ್ಲಿ ಟಿಎಂಸಿ ಉಚ್ಚಾಟಿತ ನಾಯಕ ಶಹಜಹಾನ್ ಶೇಖ್ ನ ಅಟಾಟೋಪ ಮಿತಿ ಮೀರಿದ್ದ ಕಾಲವದು. ಆತನ ಆಪ್ತರ ದೌರ್ಜನ್ಯ ನಡೆಸಿತು ಎಲ್ಲೆ ಮೀರಿತ್ತು. ಸಂದೇಶ್ ಖಾಲಿಯಲ್ಲಿ ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗ್ತಾ ಇತ್ತು. ಅವರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲಾಗಿತ್ತು. ಇಡೀಸಂದೇಶ್ ಖಾಲಿ ಈ ಗೂಂಡಾಗಳ ಭಯದಿಂದ ನಡುಗಿಹೋಗಿತ್ತು. ಅಂಥ ಸಂದರ್ಭದಲ್ಲಿ ಆ ದೌರ್ಜನ್ಯಗಳ ಬಗ್ಗೆ ಮೊದಲ ಬಾರಿಗೆ ದನಿ ಎತ್ತಿದ್ದೇ ಈ ರೇಖಾ ಪಾತ್ರ.
ರೇಖಾ ಕೂಡ ಸ್ವತಃ ದೌರ್ಜನ್ಯಕ್ಕೆ ಒಳಗಾಗಿದ್ದರು. ಆದಾಗ್ಯೂ ಆ ಸಂದರ್ಭದಲ್ಲಿ ದಿಟ್ಟತನ ತೋರಿಸಿದ ದಿಟ್ಟೆ ಅಂದ್ರೆ ರೇಖಾ. ಆ ಎಲ್ಲ ದಬ್ಬಾಳಿಕೆಗಳಿಗೆ ಬೇಸತ್ತು ಶಹಜಹಾನ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಿದ ಮೊದಲ ಮಹಿಳೆ ಈಕೆ. ಆನಂತರ ಟಿಎಂಸಿ ವಿರುದ್ಧ ಹೋರಾಟ ತೀವ್ರಗೊಳ್ಳಲು ಈಕೆಯೇ ಕಾರಣ.
ರೇಖಾ ಪಾತ್ರಾ ಅವರ ದಿಟ್ಟತನದಿಂದಾಗಿ, ಸದ್ಯ ಆರೋಪಿಗಳಾದ ಟಿಎಂಸಿ ನಾಯಕ ಶೇಖ್ ಷಹಜಹಾನ್, ಶಿಬು ಹಜ್ರಾ ಮತ್ತು ಉತ್ತಮ್ ಸರ್ದಾರ್ ಜೈಲು ಸೇರಿದ್ದಾರೆ. ಆನಂತರವೂ ಲೈಂಗಿಕ ದೌರ್ಜನ್ಯದ ವಿರುದ್ಧದ ಪ್ರತಿಭಟನೆಗಳನ್ನು ಮುನ್ನಡೆಸುವ ಪ್ರಮುಖ ವ್ಯಕ್ತಿಯಾಗಿ ರೇಖಾ ಹೊರಹೊಮ್ಮಿದ್ದಾರೆ. ಹೀಗಾಗಿ ಬಂಗಾಳದ ಬಸಿರ್ ಹಾತ್ ಕ್ಷೇತ್ರದಿಂದ ರೇಖಾಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ಅಲ್ಲಿ ಪೈಪೋಟಿ ಏರ್ಪಟ್ಟಿದೆ.
ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮಾತನಾಡಿದ ರೇಖಾ, “ಸಂದೇಶ್ ಖಾಲಿಯಲ್ಲಿ ಹಿಂಸಾಚಾರದಿಂದ ತತ್ತರಿಸಿಹೋಗಿರುವ ಸಂತ್ರಸ್ತೆಯರ ಪರವಾಗಿ ಮುಂದಿನ ದಿನಗಳಲ್ಲಿಯೂ ನಾನು ಹೋರಾಡುವೆ. ಸಂದೇಶ್‌ಖಾಲಿ ಸಂತ್ರಸ್ತೆಯರಿಗೆ ನಾನು ನ್ಯಾಯ ಒದಗಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.
ಪತಿ ಕೇರಳ ಮತ್ತು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ನನ್ನ ಕ್ಷೇತ್ರದಿಂದ ಯಾರೂ ಬೇರೆ ರಾಜ್ಯಗಳಿಗೆ ವಲಸೆ ಹೋಗದಂತೆ ಕ್ರಮ ಕೈಗೊಳ್ಳುತ್ತೇನೆ. ಈ ಭಾಗದ ಜನರಿಗೆ ಇಲ್ಲಿಯೇ ಉದ್ಯೋಗ ಸಿಗಬೇಕಿದೆ ಎಂಬ ಕನಸನ್ನು ರೇಖಾ ಬಿಚ್ಚಿಟ್ಟಿದ್ದಾರೆ.
ಬಸಿರ್ ಹಾತ್ ಕ್ಷೇತ್ರದ ಹಾಲಿ ಸಂಸದೆ ನುಸ್ರತ್ ಜಹಾನ್.ಈಕೆ ಖ್ಯಾತ ನಟಿ. ಈಕೆಯನ್ನು ಕೈಬಿಟ್ಟು ಟಿಎಂಸಿ ಈ ಬಾರಿ ಹಾಜಿ ನೂರುಲ್ ಇಸ್ಲಾಂಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರಯವ ಮುಸ್ಲಿಂ ಮತಗಳ ಮೇಲರ ಟಿಎಂಸಿ ಕಣ್ಣಿಟ್ಟಿದೆ.
ಚುನಾವಣೆ ಅಂದ್ರೆ ಹಣ ಬಲ, ತೋಳ್ಬಲ ಇದ್ದವರಿಗೆ ಮಾತ್ರ ಎಂಬ ಸಂದಿಗ್ಧತೆಯ ಮಧ್ಯೆಯೂ ಬಿಜೆಪಿ ಈ ಸಂತ್ರಸ್ತೆಗೆ ಟಿಕೆಟ್ ನೀಡಿದೆ. ಸಂದೇಶ್ ಖಾಲಿಯಿಂದ ಹೊಸ ಸಂದೇಶ ರವಾನಿಸಿದೆ. ಅನ್ಯಾಯ ಮೆಟ್ಟಿ ನಿಂತವರಿಗೆ ಮತದಾರ ಮತ ಹಾಕುತ್ತಾನಾ ಅನ್ನೋದನ್ನು ಮಾತ್ರ ಕಾದು ನೋಡಬೇಕಿದೆ.