ಹೈದರಾಬಾದ್: ಐಪಿಎಲ್ ನಲ್ಲಿ ಹೈದರಾಬಾದ್ ತಂಡ ಇತಿಹಾಸ ಸೃಷ್ಟಿಸಿದೆ.
ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ನಷ್ಟಕ್ಕೆ 277 ರನ್ ಗಳಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ತಂಡ ಎಂಬ ದಾಖಲೆಯನ್ನು ಹೈದರಾಬಾದ್ ನಿರ್ಮಿಸಿದೆ. ಆರಂಭದಿಂದಲೂ ಬೌಂಡರಿ, ಸಿಕ್ಸರ್ ಸಿಡಿಸಿದ ಹೈದರಾಬಾದ್ ಕೊನೆಯವರೆಗೂ ಅದೇ ಲಯ ಮುಂದುವರೆಸಿಕೊಂಡು ಹೋಯಿತು. ಹೀಗಾಗಿ ಇಂತಹ ದೊಡ್ಡ ಮಟ್ಟದ ಸ್ಕೋರ್ ನಿರ್ಮಿಸಿತು.
ಇಲ್ಲಿಯವರೆಗೆ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿತ್ತು. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಇಲ್ಲಿಯವರೆಗೆ ಈ ಸ್ಕೋರ್ ಅತೀ ದೊಡ್ಡ ಸ್ಕೋರ್ ಆಗಿದೆ. ಆ ಪಂದ್ಯದಲ್ಲಿ ಕ್ರಿಸ್ ಗೇಲ್ ಔಟಾಗದೇ 175 ರನ್ ಗಳಿಸಿದ್ದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ಬ್ಯಾಟರ್‌ಗಳು ಆರಂಭದಿಂದಲೇ ಅಬ್ಬರಿಸಲು ಆರಂಭಿಸಿದರು. ಮೊದಲ ವಿಕೆಟಿಗೆ 4.1 ಓವರ್‌ಗಳಲ್ಲಿ 45 ರನ್ ಬಂದಿದ್ವು. ಎರಡನೇ ವಿಕೆಟಿಗೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ 68 ರನ್ ಗಳಿಸಿದರು. ವಿಸ್ ಹೆಡ್ 62 (24 ಎಸೆತ, 9 ಬೌಂಡರಿ, 3 ಸಿಕ್ಸರ್) ಗಳಿಸಿ ಔಟ್ ಆದರು. ಆನಂತರ ಮಾರ್ಕ್ರಾಮ್ ಮತ್ತು ಹೆನ್ರಿಕ್ ಕ್ಲಾಸನ್ ಮುಂಬೈ ಬೌಲರ್ ಗಳ ಬೆವರಿಳಿಸಿದರು. ಮುರಿಯದ ನಾಲ್ಕನೇ ವಿಕೆಟಿಗೆ 55 ಎಸೆತಗಳಲ್ಲಿ 116 ರನ್ ಸಿಡಿಸಿ ತಂಡದ ಮೊತ್ತವನ್ನು ದಾಖಲೆಯ 270 ರನ್ ಗಳ ಗಡಿ ದಾಟಿಸಿದರು. ಕ್ಲಾಸನ್ ಔಟಾಗದೇ 80 ರನ್ ( 34 ಎಸೆತ, 4 ಬೌಂಡರಿ, 7 ಸಿಕ್ಸರ್), ಮಾರ್ಕ್ರಾಮ್ ಔಟಾಗದೆ 42 ರನ್ ( 28 ಎಸೆತ, 2 ಬೌಂಡರಿ, 1 ಸಿಕ್ಸರ್)ಸಿಡಿಸಿ ಮಿಂಚಿದರು.