ಬೆಂಗಳೂರು: ಮುಂಬೈಯ ಇಂಡಿಯನ್ಸ್ ತಂಡವು 17ನೇ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ್ದು, ಗುಜರಾತ್ ಟೈಟಾನ್ಸ್ ವಿರುದ್ಧ 6 ರನ್ ಗಳ ಸೋಲು ಕಂಡಿದೆ.
2013 ರಿಂದ ಆರಂಭಿಕ ಪಂದ್ಯಗಳಲ್ಲಿ ಸೋಲಿನೊಂದಿಗೆಯೇ ಮುನ್ನಡೆಯುತ್ತಿದ್ದ ಮುಂಬೈ ಇಂಡಿಯನ್ಸ್ ಈ ಬಾರಿಯೂ ಮೊದಲ ಸೋಲು ಕಂಡಿದೆ. ಮುಂಬೈಯ ನೂತನ ನಾಯಕ ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ರೋಹಿತ್ ಶರ್ಮಾರನ್ನು ನಡೆಸಿಕೊಂಡ ರೀತಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಚೆನ್ನೈ ತಂಡದ ನೂತನ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಅವರನ್ನು ಉದಾಹರಣೆ ನೀಡಿ, ಹಿರಿಯ ನಾಯಕನನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದನ್ನ ಕಲಿತುಕೊಳ್ಳುವಂತೆ ಕಿಡಿ ಕಾರಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಬ್ಯಾಟಿಂಗ್ ವೇಳೆ ರೋಹಿತ್ ಅವರನ್ನು ಹಲವು ಬಾರಿ ಫೀಲ್ಡಿಂಗ್ ಬದಲಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್, ಇನ್ನೊಮ್ಮೆ ಲೆಗ್ ಸೈಡ್, ಮಿಡ್ ಆಫ್ ನತ್ತ ಬದಲಿಸಿದರು. ಮೈದಾನದ ಮೂಲೆ ಮೂಲೆಗೂ ಓಡಾಡಿಸಿದ್ದನ್ನು ಕಂಡು ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ. ಇನ್ನೊಂದೆಡೆ ರೋಹಿತ್ ಶರ್ಮಾ ನಾಯಕ ಹೇಳಿದ ರೀತಿಯಲ್ಲಿ ಫೀಲ್ದಿಂಗ್ ನಿರ್ವಹಿಸಿದರು.
ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ನಡೆಸಿಕೊಂಡ ರೀತಿಯ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದರಿಂದ ಅಸಮಾಧಾನಗೊಂಡ ರೋಹಿತ್ ಶರ್ಮಾ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧ ಕೆಂಡ ಕಾರಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ನೀಡಿದ ಸಲಹೆಯನ್ನೂ ಪಾಂಡ್ಯ ಕ್ಯಾರೆ ಎನ್ನದೇ ತಮ್ಮಿಷ್ಟದಂತೆ ದರ್ಪ ತೋರಿದ ದೃಶ್ಯವೂ ಕಂಡು ಬಂದಿತು. ಕರ್ಮ ನಿಮ್ಮನ್ನ ಸುಮ್ಮನೆ ಬಿಡಲ್ಲ, ಸರಿಯಾಗಿ ಮಾಡುತ್ತೆ ಎಂದು ಆಕ್ರೋಶದ ಪೋಸ್ಟ್ ಹಾಕಿಕೊಂಡಿದ್ದಾರೆ. ಪಂದ್ಯ ಮುಗಿಯುತ್ತಿದ್ದಂತೆ ಪಾಂಡ್ಯ ಹಾಗೂ ರೋಹಿತ್ ಅಭಿಮಾನಿಗಳ ಮಧ್ಯೆ ಫೈಟ್ ನಡೆಯಿತು.