ಜನವರಿ ೨೨, ಬಾಲರಾಮನ ವಿಗ್ರಹ ಲೋಕಾರ್ಪಣೆಯಾದ ದಿನ. ಬರಿ ದೇಶವಲ್ಲ, ಇಡೀ ವಿಶ್ವವೇ ಭಾರತದತ್ತ ಅಚ್ಚರಿಯಿಂದ ತಿರುಗಿ ನೋಡಿದ ದಿನವದು. ಭಾರತೀಯ ಹಿಂದೂಗಳ ಶತ-ಶತಮಾನದ ಕನಸು ನನಸಾದ ದಿನವದು. ಅಂದು ಪ್ರಧಾನಿ ನರೇಂದ್ರ ಮೋದಿ ಬಾಲರಾಮನ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದಂತೆಯೇ ಅಯೋಧ್ಯೆಯ ಚಿತ್ರಣವೇ ಬದಲಾಗಿಬಿಟ್ಟಿದೆ. ಅಲ್ಲಿನ ಮಣ್ಣಿನ ಕಣ ಕಣಕ್ಕೂ ಚಿನ್ನದ ಬೆಲೆ ಬಂದಿದೆ.
ಹಿಂದೂಗಳ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಕಣ್ಣುಮುಚ್ಚಿದರ , ಲಕ್ಷಾಂತರ ಭಕ್ತರು ನಿತ್ಯ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ದೇಶ-ವಿದೇಶಗಳಿಂದ ಬರುವ ಭಕ್ತರು ರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಲ್ಲಿ ಭಕ್ತಿ- ಭಾವದ ಜೊತೆಗೆ ಆರ್ಥಿಕತೆಯೂ ಹೇಗೆ ಬೆಸೆದುಕೊಂಡಿದೆ ಅನ್ನೋದಕ್ಕೆ ಸಾಕ್ಷಿಯೆಂಬಂತೆ ಇಲ್ಲಿನ ರಿಯಲ್ ಎಸ್ಟೇಟ್ ಚಿಗುರಿಕೊಂಡಿದೆ.
ಅಯೋಧ್ಯೆಯಲ್ಲಿ ಕೇವಲ ಮೂರೇ-ಮೂರು ತಿಂಗಳಲ್ಲಿ ಆಸ್ತಿ ಬೆಲೆ ಶೇ.179ರಷ್ಟು ಏರಿಕೆಯಾಗಿದೆ. ಅಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಹೂಡಿಕೆ ಮಾಡಲು ಮುಂದಾಗಿದ್ದಾರೆ. ಅಕ್ಟೋಬರ್ 2023ರಲ್ಲಿ ಅಯೋಧ್ಯೆಯಲ್ಲಿ ಪ್ರತಿ ಚದರ ಅಡಿಗೆ 3,174 ರೂ.ಗಳಷ್ಟಿದ್ದ ಜಾಗದ ದರ ಈಗ ಚದರ ಅಡಿಗೆ 8,877 ರೂಪಾಯಿಗೆ ಏರಿಕೆಯಾಗಿದೆ. 10 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯ ದರ ಸದ್ಯ ಸುಮಾರು 28 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಮಂದಿರಕ್ಕೆ ಸಮೀಪವಿರುವ ಸ್ಥಳಗಳಲ್ಲಿ ಹಿಂದೆ ಪ್ರತಿ ಚದರ ಅಡಿಗೆ 300 ರೂ. ಇರುವ ಬೆಲೆ ಈಗ 15 ಸಾವಿರ ರೂ.ಗೆ ಏರಿಕೆಯಾಗಿದೆ. ಅಯೋಧ್ಯೆ ನಿರ್ಮಾಣಕ್ಕೂ ಮೊದಲು ಆಸ್ತಿ ಮಾರಾಟ ಮಾಡಿದವರು ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಅಯೋಧ್ಯೆಯಲ್ಲಿ ವಸತಿ ಆಸ್ತಿಗಳ ಹುಡುಕಾಟವು 6.25 ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಅಲ್ಲಿನ ಸ್ಥಳೀಯ ಮಾಹಿತಿಯಂತೆ ಫೈಜಾಬಾದ್ ರಸ್ತೆ, ದಿಯೋಕಾಲಿ, ಚೌಡಾ ಕೋಸಿ ಪರಿಕ್ರಮ, ರಿಂಗ್ ರೋಡ್, ನಯಾಘಾಟ್ ನಂತಹ ಅನೇಕ ಪ್ರದೇಶಗಳಲ್ಲಿ ಭೂಮಿ ಮತ್ತು ಆಸ್ತಿಯ ಕುರಿತು ಹೆಚ್ಚಿನ ಹೂಡಿಕೆ ಮಾಡಲಾಗುತ್ತಿದೆ. ರಾಮ ಮಂದಿರ ಸುತ್ತಲಿನ 6 ರಿಂದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ಬರುವ ಈ ಪ್ರದೇಶಗಳ ಬಗ್ಗೆ ಹೂಡಿಕೆದಾರರ ಆಸಕ್ತಿ ತೀವ್ರವಾಗಿದೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಆನ್ ಲೈನಲ್ಲಿ ಆಸ್ತಿ ಹುಡುಕಾಟ 2022 ರಲ್ಲಿ 29,889 ಕ್ಕೆ ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ANAROCK ಗ್ರೂಪ್ ಪ್ರಕಾರ, 2019 ರಲ್ಲಿ ಪ್ರತಿ ಚದರ ಅಡಿಗೆ ರೂ 1,000 ರಿಂದ ರೂ 2,000 ರಷ್ಟಿದ್ದ ಭೂಮಿಯ ದರಗಳು ಈಗ ಪ್ರತಿ ಚದರ ಅಡಿಗೆ ರೂ 4,000 ರಿಂದ ರೂ 6,000 ರಷ್ಟಿದೆ. ಹೀಗಾಗಿ ಹೊರಗಿನ ಹೂಡಿಕೆದಾರರ ಜತೆಗೆ ಸ್ಥಳೀಯರೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ದೊಡ್ಡ ಹೋಟೆಲ್ ಗುಂಪುಗಳಾದ ತಾಜ್ ಮತ್ತು ರಾಡಿಸನ್ ಇಲ್ಲಿ ಭೂಮಿ ಖರೀದಿಸಲು ಹೆಚ್ಚಿನ ಆಸಕ್ತಿ ವಹಿಸುತ್ತಿವೆ.
ಅಯೋಧ್ಯೆ ಮಾತ್ರವಲ್ಲ ನಗರದ ಹೊರ ವಲಯದಲ್ಲಿಯೂ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಫೈಜಾಬಾದ್ ರಸ್ತೆಯ ಭಾಗ. 2019ರಲ್ಲಿ ಇಲ್ಲಿ ಚದರ ಅಡಿಯ ಭೂಮಿಗೆ 400 ರಿಂದ 700 ರೂ. ಇತ್ತು. 2023ರ ಅಕ್ಟೋಬರ್ ವೇಳೆಗೆ ಚದರ ಅಡಿಗೆ 1,500 ರೂ.ಗಳಿಂದ 3,000 ರೂ.ಗೆ ಏರಿಕೆಯಾಗಿದೆ. ಅಯೋಧ್ಯೆ ನಗರದಲ್ಲಿ ಭೂಮಿಯ ಬೆಲೆ 2019ರಲ್ಲಿ ಪ್ರತಿ ಚದರ ಅಡಿಗೆ 1,000-2,000 ರೂ.ಗಳಿಂದ ಪ್ರಸ್ತುತ ಪ್ರತಿ ಚದರ ಅಡಿಗೆ 4,000-6,000 ರೂ.ಗೆ ಹೆಚ್ಚಾಗಿದೆ.
2019ರಲ್ಲಿ ಲಕ್ನೋ-ಗೋರಖ್ ಪುರ ಹೆದ್ದಾರಿಯಲ್ಲಿ ವಾಣಿಜ್ಯ ಪ್ಲಾಟ್ ಗೆ 2 ಕೋಟಿ ರೂ. ಇದ್ದ ದರ ಸದ್ಯ 5 ಕೋಟಿಗೆ ಏರಿಕೆಯಾಗಿದೆ. ಅಭಿನಂದನ್ ಲೋಧಾ ಹೌಸ್ ಅಯೋಧ್ಯೆಯಲ್ಲಿ 25 ಎಕರೆ ವಸತಿ ನಿವೇಶನ ಅಭಿವೃದ್ಧಿ ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ. ರಾಮನಿದ್ದ ಜಾಗ ಈಗ ಮಣ್ಣಲ್ಲ..ಹೊನ್ನು ಎಂದರೆ ತಪ್ಪಾಗಲಾರದು. ಕೇವಲ ರಿಯಲ್ ಎಸ್ಟೇಟ್ ಅಷ್ಟೇ ಅಲ್ಲ. ಇಡೀ ಅಯೋಧ್ಯೆ ಜನತೆಯ ಆರ್ಥಿಕ ಸ್ಥಿತಿಯೇ ಈಗ ಬದಲಾಗಿದೆ. ಸ್ಥಳೀಯರ ಆದಾಯ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದು ಭಾರತದ ಒಂದು ಊರಿನ ಒಂದು ದೇವಾಲಯದ ಕಥೆ. ಆದ್ರೆ ಭಾರತದಲ್ಲಿ ಇಂಥ ನೂರಾರು ಪ್ರಮುಖ ದೇವಾಲಯಗಳಿವೆ. ಎಲ್ಲ ದೇವಾಲಯಗಳು ಇದೇ ರೀತಿ ಅಭಿವೃದ್ಧಿ ಕಂಡಲ್ಲಿ. ಟೆಂಪಲ್ ಎಕಾನಮಿ ಎಂಬ ಹೊಸ ಅವಕಾಶ ಬಹು ವ್ಯಾಪಕವಾಗಿ ದೇಶಾದ್ಯಂತ ವಿಸ್ತರಿಸಲಿದೆ. ದೇವಾಲಯಗಳು ಭಕ್ತಿಯನ್ನು ಹಂಚುವ ಶ್ರದ್ಧಾ ಕೇಂದ್ರಗಳಷ್ಟೇ ಅಲ್ಲ, ದೇಶದ ಅಭಿವೃದ್ಧಿಗೂ ಕೊಡುಗೆ ನೀಡುವ ಆರ್ಥಿಕ ಮೂಲಗಳು ಅನ್ನೋದನ್ನು ಅಯೋಧ್ಯೆಯ ಈ ಬೆಳವಣಿಗೆ ಸಾಭೀತುಪಡಿಸಿದೆ.