ಸರ್ಕಾರ ಕಾನೂನನ್ನು ಎಷ್ಟೇ ಕಠಿಣಗೊಳಿಸಿದರು ಸ್ವಚ್ಛಂದವಾಗಿ ಆಡಿಕೊಂಡಿರಬೇಕಿದ್ದ ಮಕ್ಕಳ ಬಾಳಲ್ಲಿ ಕೊಳ್ಳಿ ಇಡುವ ಕಾರ್ಯ ನಡೆಯುತ್ತಲೇ ಇದೆ. ಜಗತ್ತೇ ಗೊತ್ತಿರದ ಮಕ್ಕಳನ್ನು ವಿವಾಹ ಬಂಧನವೆಂಬ ಕೂಪಕ್ಕೆ ತಳ್ಳಿ, ಬಾಲ್ಯ ಕಸಿಯುವ ಅನಿಷ್ಟ ಪದ್ಧತಿ ಕರ್ನಾಟಕದಲ್ಲಿ ಅವ್ಯಾಹತವಾಗಿದೆ. ಎರಡು ವರ್ಷಗಳಿಂದ ಕ್ರಮವಾಗಿ 418, 328 ಬಾಲ್ಯ ವಿವಾಹಗಳು ನಡೆದಿದ್ದೇ ಇದಕ್ಕೆ ಸಾಕ್ಷಿ.
ಬಡತನ, ವಲಸೆ, ಕಾನೂನು ಅರಿವಿನ ಕೊರತೆ, ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ಹೋದಾಗ ಹೆಣ್ಣು ಮಕ್ಕಳನ್ನು ರಕ್ಷಿಸಲಾಗದ ಪರಿಸ್ಥಿತಿಯಿಂದಾಗಿ ಈ ಅನಿಷ್ಠ ಪದ್ಧತಿ ನಡೆಯುತ್ತಿದೆ. ಶಾಲೆಗಳು ದೂರ ಇವೆ. ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕಳಿಸುವುದು ಕಷ್ಟಕರ ಎಂದು ವಿವಾಹ ಬಂಧನಕ್ಕೆ ದೂಡುತ್ತಿದ್ದಾರೆ. ಇನ್ನೂ ಹಲವಾರು ಕಾರಣಗಳಿಂದ ಪೋಷಕರು ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ.
ಈ ಪೈಕಿ ಮಂಡ್ಯ ಮೊದಲ ಸ್ಥಾನದಲ್ಲಿದೆ. ಆನಂತರ ಶಿವಮೊಗ್ಗ, ಮೈಸೂರು ಜಿಲ್ಲೆಗಳು ಪಡೆದಿವೆ. ರಾಜ್ಯ ಮಹಿಳಾ ಇಲಾಖೆ ಎರಡು ವರ್ಷಗಳಲ್ಲಿ 716 ಜನರ ವಿರುದ್ಧ ಎಪ್ ಐಆರ್ ದಾಖಲಿಸಿದೆ. ಆದರೆ, ಶಿಕ್ಷೆ ಯಾರಿಗೂ ಆಗಿಲ್ಲ ಎನ್ನುವುದು ವಿಪರ್ಯಾಸ. ಹೀಗಾಗಿಯೇ ಬಾಲ್ಯವಿವಾಹ ನಡೆಯುತ್ತಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ರಾಜ್ಯದಲ್ಲಿ 2021-22ರಲ್ಲಿ 2189, 2022-23ರಲ್ಲಿ 2,194 ಪ್ರಕರಣಗಳು ದಾಖಲಾಗಿವೆ. 5,341 ದೂರುಗಳು ದಾಖಲಾಗಿದ್ದವು. ಈ ಪೈಕಿ ಮೊದಲ ವರ್ಷ 2,401 ಪ್ರಕರಣ ತಡೆದರೆ, 418 ಬಾಲ್ಯ ವಿವಾಹಗಳು ನಡೆದಿವೆ. 389 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎರಡನೇ ವರ್ಷ 2522 ದೂರುಗಳು ದಾಖಲಾಗಿದ್ದವು. ಇದರಲ್ಲಿ 2,194 ವಿವಾಹಗಳನ್ನು ತಡೆದರೂ 328 ವಿವಾಹಗಳು ನಡೆದವು. ಈ ಪೈಕಿ 327 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೇಳುತ್ತಿದೆ.
ಅಂಕಿ-ಅಂಶ ನೋಡುವುದಾದರೆ ಮಂಡ್ಯ- 62, ಶಿವಮೊಗ್ಗ- 51, ಮೈಸೂರು- 36, ಬಾಗಲಕೋಟೆ- 28 ಬಾಲ್ಯವಿವಾಹಗಳು ನಡೆದಿವೆ. 18 ವರ್ಷದೊಳಗಿನ ಮಕ್ಕಳ ಮೂಳೆ ಬೆಳೆದಿರುವುದಿಲ್ಲ. ಗರ್ಭಕೋಶ ಕೂಡ ಹಾಗೆಯೇ. ರಕ್ತಹೀನತೆಯಿಂದ ಬಳಲುತ್ತಿರುತ್ತಾರೆ. ಈ ವೇಳೆ ಗರ್ಭಪಾತದ ಸಮಸ್ಯೆಗಳು ಹೆಚ್ಚಾಗುತ್ತವೆ. ತಾಯಿ – ಮಗುವಿಗೆ ಮಾರಕವಾಗಲಿದೆ. ಮುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಗು ಹುಟ್ಟುತ್ತಲೇ ಸಾಯಬಹುದು. ಬಾಲಕಿ ಕೌಟುಂಬಿಕ ವಾತಾವರಣಕ್ಕೂ ಹೊಂದಿಕೊಳ್ಳಲಾಗದೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಖಿನ್ನತೆ, ಆತಂಕಕ್ಕೆ ಒಳಗಾಗುತ್ತಾಳೆ. ಹೀಗಾಗಿ ಸಾಕಷ್ಟು ತೊಂದರೆಗಳು ಆಗುತ್ತವೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನಾದರೂ ರಾಜ್ಯದಲ್ಲಿ ಬಾಲ್ಯ ವಿವಾಹ ಕಡಿಮೆಯಾಗುವುದೇ ನೋಡಬೇಕಿದೆ.