ನವದೆಹಲಿ: ಮುಂಬರುವ ವಿಧಾನಸಭಾ ಹಾಗೂ 2029ರ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ತನ್ನ ಸಂಘಟನೆಗೆ ಮೇಜರ್ ಸರ್ಜರಿ ಮಾಡಿದೆ. ವಿವಿಧ ರಾಜ್ಯಗಳು ಮತ್ತು ಸಾಂಸ್ಥಿಕ ವಿಭಾಗಗಳಿಗೆ ಬರೋಬ್ಬರಿ 81 ರಾಷ್ಟ್ರೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಎಐಸಿಸಿ (AICC) ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ 43 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ಹಾಲಿ ಕಾರ್ಯನಿರ್ವಹಿಸುತ್ತಿದ್ದ 25 ಮಂದಿಯನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.
ಸಾಮಾಜಿಕ ನ್ಯಾಯ ಮತ್ತು ಯುವ ನಾಯಕತ್ವಕ್ಕೆ ಆದ್ಯತೆ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ‘ಸಾಮಾಜಿಕ ನ್ಯಾಯ’ದ ಸೂತ್ರ ಈ ನೇಮಕಾತಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಟ್ಟು 81 ಕಾರ್ಯದರ್ಶಿಗಳ ಪೈಕಿ ಶೇ. 50ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (OBC) ನೀಡಲಾಗಿದೆ. ಜಾತಿವಾರು ಲೆಕ್ಕಾಚಾರದಂತೆ ಸಾಮಾನ್ಯ ವರ್ಗದ 29, ಒಬಿಸಿ 20, ಅತಿ ಹಿಂದುಳಿದ ವರ್ಗ (ಇಬಿಸಿ) 5, ಎಸ್ಸಿ 11, ಎಸ್ಟಿ 5 ಹಾಗೂ ಅಲ್ಪಸಂಖ್ಯಾತ ಸಮುದಾಯದ 11 ಮಂದಿಗೆ ಸ್ಥಾನ ಕಲ್ಪಿಸಲಾಗಿದೆ.
ಇದರೊಂದಿಗೆ 12 ಮಹಿಳೆಯರಿಗೂ (ಶೇ. 15ರಷ್ಟು) ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಅವಕಾಶ ನೀಡಲಾಗಿದೆ. ವಿಶೇಷವೆಂದರೆ, ನೂತನ ಕಾರ್ಯದರ್ಶಿಗಳ ಸರಾಸರಿ ವಯಸ್ಸು 49 ಆಗಿದ್ದು, ಇದರಲ್ಲಿ ಮೂರನೇ ಎರಡರಷ್ಟು ಮಂದಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.
ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ
ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾಹುಲ್ ಗಾಂಧಿ ಅವರು ಸುಮಾರು 200ಕ್ಕೂ ಹೆಚ್ಚು ಪಕ್ಷದ ನಾಯಕರನ್ನು ಖುದ್ದಾಗಿ ಸಂದರ್ಶಿಸಿ, ಅವರ ಕಾರ್ಯವೈಖರಿಯನ್ನು ಪರಾಮರ್ಶಿಸಿದ್ದರು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಕೂಡ ಪಾಲ್ಗೊಂಡಿದ್ದರು. ಅಂದಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಪಟ್ಟಿಗೆ ಈಗ ಅಂತಿಮ ಮುದ್ರೆ ಬಿದ್ದಿದೆ.
ಯಾರಿಗೆ ಯಾವ ಹೊಣೆ? ಯಾರಿಗೆ ಕೊಕ್?
ಪಕ್ಷದ ಸಂವಹನ, ಪ್ರಚಾರ, ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿಭಾಗದ ಕಾರ್ಯದರ್ಶಿಗಳಾಗಿ ಡಾ. ವಿನೀತ್ ಪುನಿಯಾ ಮತ್ತು ರುಚಿರಾ ಚತುರ್ವೇದಿ ಅವರನ್ನು ಮುಂದುವರಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯ ಜವಾಬ್ದಾರಿಯನ್ನು ಮತ್ತೊಮ್ಮೆ ಪ್ರಣವ್ ಝಾ ಮತ್ತು ಗೌರವ್ ಪಾಂಧಿ ಅವರಿಗೆ ವಹಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಅಭಿಷೇಕ್ ದತ್, ವರುಣ್ ಚೌಧರಿ, ಕುನಾಲ್ ಚೌಧರಿ, ಜಗದೀಶ್ ಚಂದರ್ ಜಾಂಗಿದ್, ಅಬ್ದುಲ್ ಹನ್ನಾನ್ ಮತ್ತು ಸಂಜೀವ್ ಆರ್ಯ ಅವರ ಜವಾಬ್ದಾರಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಾಜಸ್ಥಾನಕ್ಕೆ ವಿಶ್ವ ವಿಜಯ್ ಸಿಂಗ್, ಪೋರ್ಲಕ್ ಖಾರ್ಟೆ, ಡಾ. ಪಲಕ್ ವರ್ಮಾ ಮತ್ತು ಮನೋಜ್ ಬಾಗ್ರಿ ಅವರನ್ನು ನೇಮಿಸಲಾಗಿದೆ. ಮತ್ತೊಂದೆಡೆ, ಅಂಬಾ ಪ್ರಸಾದ್, ಬಿ.ಎಂ. ಸಂದೀಪ್, ಚೇತನ್ ಚೌಹಾಣ್, ಚಿರಂಜೀವ್ ರಾವ್, ದಿವ್ಯಾ ಮದೆರ್ನಾ, ಮನ್ಸೂರ್ ಅಲಿ ಖಾನ್, ರೋಜಿ ಎಂ. ಜಾನ್, ಟಿ.ಎನ್. ಪ್ರತಾಪನ್ ಸೇರಿದಂತೆ 25 ಮಂದಿಯನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ.
ಕಾಂಗ್ರೆಸ್ ಸಂಘಟನೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿಗಳು ರಾಜ್ಯ ಉಸ್ತುವಾರಿಗಳ ಮಾರ್ಗದರ್ಶನದಲ್ಲಿ ಕ್ಷೇತ್ರಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾರೆ. ಇತ್ತೀಚೆಗಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಲವು ಕಾರ್ಯದರ್ಶಿಗಳಿಗೆ ಬಡ್ತಿ ನೀಡಿ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಉಸ್ತುವಾರಿಗಳನ್ನಾಗಿ ನೇಮಿಸಲಾಗಿತ್ತು ಎಂಬುದು ಗಮನಾರ್ಹ.


















